ದಾವಣಗೆರೆ: ಯುಗಾದಿ ಹಬ್ಬಕ್ಕೆ ದಾವಣಗೆರೆಯ ಮಾವನ ಮನೆಗೆ ಬಂದವನು ಭೀಕರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ. ಯುಗಾದಿ ಹಬ್ಬಕ್ಕೆ ಹೆಂಡತಿ ಜತೆ ಹಾವೇರಿ ಜಿಲ್ಲೆಯಿಂದ ದಾವಣಗೆರೆ ಮಾವನ ಮನೆಗೆ ಬಂದವನು ಶಾಮನೂರು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದೆ.
ಕತ್ತು ಕೊಯ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಎಸ್.ಎಸ್.ಬಡಾವಣೆ ರಿಂಗ್ ರಸ್ತೆಯ ಆಫೀರ್ಸ್ ಕ್ಲಬ್ ಸಮೀಪ ಗುರುವಾರ ಬೆಳಗಿನ ಜಾವ ನಡೆದಿದೆ.ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ (35) ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಮಹಾಂತೇಶ್ ಪುಟ್ಟಪ್ಪ ಚೌರದ ದಾವಣಗೆರೆಯಲ್ಲಿ ವಿವಾಹವಾಗಿದ್ದು, ಆಗಾಗ ದಾವಣಗೆರೆಯ ಬುದ್ಧ ಬಸವ ನಗರಕ್ಕೆ ಬರುತ್ತಿದ್ದ. ಯುಗಾದಿ ಹಬ್ಬಕ್ಕಾಗಿ ದಾವಣಗೆರೆಗೆ ಆಗಮಿಸಿದ್ದನು. ಪತ್ನಿಯ ಮನೆಯಿಂದ ನಾಪತ್ತೆಯಾಗಿದ್ದವ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆಗೀಡಾಗಿರುವ ಮಹಾಂತೇಶ್ ಪುಟ್ಟಪ್ಪ ಚೌರದ ವಿರುದ್ಧ ಈಗಾಗಲೇ ಹಾವೇರಿ ಪೊಲೀಸ್ ಠಾಣೆಯಲ್ಲಿ ೧೦೯ ರಡಿ ಒಂದು ಪ್ರಕರಣ ದಾಖಲಾಗಿತ್ತು. ಅಲ್ಲದೆ ಈತ ಮದ್ಯವ್ಯಸನಿಯಾಗಿದ್ದನು. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.