Connect with us

Dvgsuddi Kannada | online news portal | Kannada news online

ಫೆ. 13ರಂದು ನಡೆಯುವ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆ  

ಪ್ರಮುಖ ಸುದ್ದಿ

ಫೆ. 13ರಂದು ನಡೆಯುವ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆ  

ದಾವಣಗೆರೆ : ಸೇವಾಲಾಲ್ ರವರ 282 ನೇ ಜಯಂತಿ ಉತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಅರ್ಥಪೂರ್ಣ ಆಚರಿಸಲು ತೀರ್ಮಾನಿಸಲಾಗಿದೆ.  ಫೆ. 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ಆಚರಿಸಲಾಗುತ್ತಿದ್ದು, ಆಯಾ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮನ್ವಯದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಅವರು ಸೂಚಿಸಿದರು.

ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ ಸೇವಾಲಾಲರು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಜಾತಿ, ಸಮುದಾಯದವರು ಶ್ರಧ್ಧಾ ಭಕ್ತಿಯಿಂದ ಆಚರಿಸುವ ಜಯಂತಿ ಇದಾಗಿದೆ. ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಪವಿತ್ರತೆಯ ಭಾವನೆಯೊಂದಿಗೆ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರವನ್ನು ನೋಡುತ್ತೇವೆ.  ಅಧಿಕಾರಿಗಳು ಉತ್ಸವವನ್ನು ಶ್ರದ್ಧೆಯಿಂದ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಂತ ಸೇವಾಲಾಲ್ ಅವರ ಜಯಂತಿ ಉತ್ಸವವನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಫೆ. 13 ರಿಂದ 15 ರವರೆಗೆ ಆಚರಿಸಲಾಗುತ್ತಿದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಆಗಮಿಸುವುದು ಖಚಿತವಾಗಿದ್ದು ಇದಕ್ಕಾಗಿ ಅಗತ್ಯ ಹೆಲಿಪ್ಯಾಡ್ ನಿರ್ಮಾಣ ಆಗಬೇಕು. ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾರ್ಯ ಆಗಬೇಕು. ನಾಡಿನ ಹಲವು ಭಾಗಗಳಿಂದ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಉತ್ಸವ ದಿನಗಳಂದು ಹೊನ್ನಾಳಿ, ಹರಿಹರ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಸವಳಂಗ, ಮುಂತಾದ ಕಡೆಗಳಿಂದ ಕೆಎಸ್‍ಆರ್‍ಟಿಸಿಯವರು ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದರು.

ಜಾತ್ರೆಯ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಬೆಸ್ಕಾಂ ಕ್ರಮ ವಹಿಸಬೇಕು. ಹೆಚ್ಚು ಜನ ಸೇರುವುದರಿಂದ ಪರಿಸರ ಸ್ವಚ್ಛತೆ ಕಾಯ್ದುಕೊಳ್ಳಲು ನಿರ್ಮಿತಿ ಕೇಂದ್ರದಿಂದ ತಾತ್ಕಾಲಿಕ ಶೌಚಾಲಯ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ಕ್ಷೇತ್ರದಲ್ಲಿ ಸ್ವಚ್ಛತೆಗಾಗಿಯೇ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳ ಗುರುತಿಸಿ ಸಿದ್ಧಪಡಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಟ್ಯಾಂಕರ್‍ಗಳನ್ನು ಒದಗಿಸಬೇಕು ಎಂದು ರಾಜೀವ್ ತಿಳಿಸಿದರು.

ಫೆ. 13 ರಿಂದ 15 ರವರೆಗೂ ಕ್ಷೇತ್ರದಲ್ಲಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಆಹಾರದ ಗುಣಮಟ್ಟ ಪರಿಶೀಲನೆ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದ್ದು, ಆಹಾರ ತಯಾರಿಕೆ ಸ್ಥಳಕ್ಕೆ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ, ಅನ್ಯ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಎಲ್ಲ ಇಲಾಖೆ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ, ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಉತ್ಸವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ, ಅಗತ್ಯ ಔಷಧಿ, ವೈದ್ಯರು, ಆ್ಯಂಬುಲೆನ್ಸ್ ಹಾಗೂ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ನಿಯೋಜಿಸಬೇಕು. ಕೋವಿಡ್ ಪರೀಕ್ಷೆಗೆ ವ್ಯವಸ್ಥೆಗೊಳಿಸಬೇಕು. ಕ್ಷೇತ್ರದಲ್ಲಿ ಪರಿಸರ ಸ್ವಚ್ಛತೆ ಕಾಯ್ದುಕೊಳ್ಳಲು ಸ್ಥಳೀಯ ಸಂಸ್ಥೆಗಳಿಂದ ಕಸ ವಿಲೇವಾರಿ ಆಟೋ ಟಿಪ್ಪರ್ ವ್ಯವಸ್ಥೆಗೊಳಿಸಬೇಕು, ಉತ್ಸವದ ಬಳಿಕ ಇಡೀ ಕ್ಷೇತ್ರದಲ್ಲಿ ಯಾವುದೇ ಕಸದ ರಾಶಿ ಇರದಂತೆ ಪೂರ್ಣ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿವೈಎಸ್‍ಪಿ ಪ್ರಶಾಂತ್ ಅವರು ಮಾತನಾಡಿ, ಜಯಂತಿ ಉತ್ಸವವನ್ನು ಯಶಸ್ವಿಯಾಗಿಸಲು, ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪಾರ್ಕಿಂಗ್, ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಜಾತ್ರಾ ಸ್ಥಳದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ನಿರ್ವಹಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಭಕ್ತರು, ಮಾಲಾಧಾರಿಗಳು, ಗಣ್ಯವ್ಯಕ್ತಿಗಳ ಪ್ರವೇಶಕ್ಕೆ ಅಗತ್ಯ ಮಾರ್ಗ ಕೈಗೊಳ್ಳಲಾಗುವುದು. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಇಲಾಖೆಯಿಂದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂತ ಸೇವಾಲಾಲ್ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಮಾತನಾಡಿದರು.  ಸಭೆಯಲ್ಲಿ ಜಿ.ಪಂ. ಸದಸ್ಯ ಸುರೇಂದ್ರನಾಯ್ಕ, ತಾ.ಪಂ. ಸದಸ್ಯ ಪೀರ್ಯ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುನಿತಾ ಬಾಯಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನ್ಯಾಮತಿ ತಹಸಿಲ್ದಾರ್ ತನುಜಾ, ಹೊನ್ನಾಳಿ ತಹಸಿಲ್ದಾರ್ ಬಸನಗೌಡರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಸೇರಿದಂತೆ ವಿವಿಧ ಗಣ್ಯರು, ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top