ದಾವಣಗೆರೆ: ನಗರದಲ್ಲಿನ ಆಟೋ ಚಾಲಕರಿಗೆ ಮೀಟರ್ ಮತ್ತು ಮತ್ತು ಚಾಲಕನ ಸ್ವ-ವಿವರ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆಟೋ ಚಾಲಕ ಸಂಘದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಭೆಯಲ್ಲಿ ಮಾತನಾಡಿದರು. ಇಲ್ಲಿಯವರೆಗೂ ನಗರದಲ್ಲಿ 525 ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ. ಇನ್ನೂ ಮುಂದೆಯೂ ಜಪ್ತಿ ಕಾರ್ಯ ಮುಂದುವರಿಯಲಿದೆ. ಆದ್ದರಿಂದ ಮೊದಲು ಮೀಟರ್ ಮತ್ತು ಡಿಸ್ಪ್ಲೇ ಬೋರ್ಡ್ ಅಳವಡಿಕೊಂಡಲ್ಲಿ ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದರು.
ಜಿಲ್ಲೆಯ ವಿವಿದೆಡೆ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹಲವೆಡೆ ಕಿರಿದಾದ ರಸ್ತೆ ಹಾಗೂ ಅಂಡರ್ ಪಾಸ್, ಸೇವಾ ರಸ್ತೆ ಸ್ಥಾಪಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಎಸ್.ಎಸ್.ಹೈಟೆಕ್ ಮುಖ್ಯ ಆಸ್ಪತ್ರೆಯ ಮುಖ್ಯ ದ್ವಾರ ರಾಷ್ಟ್ರೀಯ ಹೆದ್ದಾರಿ-48ರ, ಚೈನೇಜ್ ಅಂಡರ್ ಪಾಸ್ ಬಳಿ ಭಾರಿ ವಾಹನ, ನಗರ ಸಾರಿಗೆ, ಲಾರಿ, ಬಸ್ ವಾಹನಗಳು ಸಂಚರಿಸುತ್ತಿವೆ. ಇಲ್ಲಿನ ಕೆಳ ಸೇತುವೆ ತುಂಬಾ ಕಿರಿದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಕುರಿತು ಮಾಹಿತಿ ಪಡೆದ ಸಂಸದೆ ಶೀಘ್ರದಲ್ಲಿಯೇ ಇದನ್ನು ಪರಿಶೀಲಿಸಿ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಡರ್ ಪಾಸ್‍ಗಳಲ್ಲಿ ವಿದ್ಯುತ್‍ದೀಪ ಅಳವಡಿಸಿ
ಅಷ್ಟೇ ಅಲ್ಲದೇ ಕೆಲವು ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‍ಗಳಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆ ಇಲ್ಲಾ. ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಅವರುಗಳಿಗೆ ತೊಂದರೆಯಾಗದಂತೆ ಅಗತ್ಯವಿರವ ಕಡೆ ಕ್ಯಾರೇಜ್-ವೇ ಹೆಚ್ಚಿಸುವುದರ ಜೊತೆಗೆ ಬೆಳಕಿನ ವಿದ್ಯುತ್‍ದೀಪದ ವ್ಯವಸ್ಥೆ ಮಾಡಬೇಕು. ಇದರಿಂದ ಕಳ್ಳತನ, ಅಪಘಾತ ಸೇರಿದಂತೆ ಇನ್ನಿತರೆ ಅಹಿತಕರ ಘಟನೆಗಳು ಜರುಗುವ ಸಂಭವ ಕಡಿಮೆಯಾಗುತ್ತದೆ ಎಂದ ಅವರು, ಮಳೆಗಾಲ ಆರಂಭವಾಗಿದೆ, ಹಲವೆಡೆ ನೀರು ನಿಲ್ಲುವ ಕುರಿತು ವರದಿ, ಆರೋಪ ಕೇಳಿ ಬರುತ್ತಿವೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಸರಿಪಡಿಸಬೇಕು ಎಂದರು.
ಅವೈಜ್ಞಾನಿಕ ಅಂಗಡಿ ಮುಂಗಟ್ಟು ತೆರವುಗೊಳಿಸಿ
ಹರಿಹರ ತಾಲ್ಲೂಕಿನ ಹರಗನಹಳ್ಳಿ ಹಾಗೂ ಆನಗೋಡು, ಹೆಬ್ಬಾಳು ಬಳಿ ಏಕಾ-ಏಕಿ ತಿರುವು ಪಡೆದುಕೊಳ್ಳುವ ವಾಹನಗಳಿಗೆ ಡಾಬಾ ಹೋಟೆಲ್, ಪೆಟ್ರೋಲ್ ಬಂಕ್, ಇನ್ನಿತರೆ ಅಂಗಡಿ ಮುಂಗಟ್ಟುಗಳು ಅವೈಜ್ಞಾನಿಕ ಮತ್ತು ಅನಧಿಕೃತವಾಗಿ ನಿರ್ಮಿಸಿರುವುದರಿಂದ ಅಪಘಾತ ಹೆಚ್ಚಾಗುತ್ತಿವೆ. ಅಲ್ಲಿನ ಅನಧಿಕೃತ, ಮತ್ತು ನಿಯಮಬಾಹಿರವಾಗಿ ಇರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಟೋಲ್‍ಗಳಲ್ಲಿ ಎನ್‍ಪಿಆರ್ ನಂಬರ್ ಪ್ಲೇಟ್ ನೊಂದಣಿ ಮಾಡಿಕೊಳ್ಳುವ ಉತ್ತಮ ಗುಣಮಟ್ಟದ ಸಿಸಿಟಿವಿ ಮತ್ತು ಬೆಳಕಿನ ವಿದ್ಯುದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನಿರ್ದೇಶಿಸಿದರು. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಸಭೆಗೆ ಮಾಹಿತಿ ನೀಡಿದರು.
ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ 70 ಕಿ.ಮೀ ವ್ಯಾಪ್ತಿಗೆ 2 ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಸ್ಪಂದಿಸಬೇಕು. ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1033 ಸಂಖ್ಯೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಆದ್ದರಿಂದ ಸಹಾಯವಾಣಿ ಸಂಖ್ಯೆಯನ್ನು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಸಹಾಯವಾಗುವಂತೆ ಕ್ರಮವಹಿಸಬೇಕು. ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಇದ್ದಾಗ ಅಪಘಾತಗಳು ಸಂಭವಿಸಿದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಗಮನಹರಿಸಿ ಸರಿಯಾದ ಸಂದರ್ಭದಲ್ಲಿ ಅಂಬುಲೆನ್ಸ್, ರಕ್ಷಣೆ ಮಾಡುವ ಮೂಲಕ ಸ್ಪಂದಿಸಲು ತಿಳಿಸಿದರು.
ಅದೇ ರೀತಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕುಂದವಾಡ ರಸ್ತೆಯಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ. ಸೂಕ್ತ ಚರಂಡಿ ವ್ಯವಸ್ತೆ ಕಲ್ಪಿಸದ ಕಾರಣ ಮಳೆ ನೀರು ಸಂಪೂರ್ಣ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಇಂತಹ ಅವೈಜ್ಞಾನಿಕವಾದ ಕಾಮಗಾರಿ ನಿರ್ಮಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಾರ್ವಜನಿಕರಿಗೆ, ಸವಾರರಿಗೆ ತೊಡಕುಂಟಾಗಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ತ್ವರಿತವಾಗಿ ತೆರವು ಮಾಡಿಸಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು.
ಹೂವಿನ ಗೂಡಂಗಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ
ನಗರದ ಪಿ.ಬಿ ರಸ್ತೆಯ ದೇವರಾಜ ಅರಸು ವೃತ್ತದ ಬಳಿ ಇರುವ ಬಿಎಸ್‍ಎನ್‍ಎಲ್ ಕಚೇರಿಯ ಮುಂಭಾಗ ಸುಮಾರು 15-15 ಹೂವಿನ ಗೂಡಂಗಿಡಿಗಳಿದ್ದು, ಅವರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ತಾತ್ಕಾಲಿಕವಾಗಿ ಸೂಕ್ತ ಕ್ರಮವಹಿಸಬೇಕು. ತದನಂತರದ ದಿನಗಳಲ್ಲಿ ಒಂದೆಡೆ ಶಾಶ್ವತ ಸ್ಥಳ ಗುರುತಿಸಿ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ ಸಂತೋಷ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ವಿಭಾಗೀಯ ನಿಯಂತ್ರಣಾಧಿಕಾರಿ ಫಕ್ರುದ್ದೀನ್, ಡಿಹೆಚ್‍ಓ ಡಾ.ಷಣ್ಮುಖಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.