ದಾವಣಗೆರೆ: ಮಲೆನಾಡಿನ ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು ಭಾಗಗಳಲ್ಲಿ ಎರಡ್ಮೂರು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹರಿಯುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಮಲೆನಾಡಿನಲ್ಲಿ ಆರಿದ್ರಾ ಮಳೆ ಸತತವಾಗಿ ಸುರಿಯುತ್ತಿದ್ದು, ನದಿಗೆ ನೀರಿನ ಹರಿವು ಹೆಚ್ಚಾಗಿದೆ.
ಜಿಲ್ಲೆಯಲ್ಲಿಂದು ಉತ್ತಮ ಮಳೆ: ದಾವಣಗೆರೆ ಜಿಲ್ಲೆಯ ಬಹುತೇಕ ಕಡೆ ಇಂದು (ಜು.05) ಉತ್ತಮ ಹದ ಮಳೆಯಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಜಿಲ್ಲೆಯ ಹರಿಹರ, ಮಲೇಬೆನ್ನೂರು, ದಾವಣಗೆರೆ, ಚನ್ನಗಿರಿ, ನ್ಯಾಮತಿ, ಹೊನ್ನಾಳಿ, ಜಗಳೂರು ಸೇರಿ ಅನೇಕ ಕಡೆ ಮಳೆಯಾಗಿದೆ. ಕಳೆದ 15 ದಿನದಿಂದ ಮಳೆ ಕೊರತೆಯಿಂದ ಮೆಕ್ಕೆಜೋಳ, ಜೋಳ ಬಿತ್ತನೆ ಮಾಡಿದ್ದ ರೈತರು ಆತಂಕಗೊಂಡಿದ್ದರು. ಇಂದು ಸುರಿದ ಮಳೆ ರೈತರಲ್ಲಿ ಸಂತಸ ಮೂಡಿಸಿದೆ.
ಭದ್ರಾ ಡ್ಯಾಂ ನಲ್ಲಿಯೂ ಸಹ ಒಳ ಹರಿವು ಹೆಚ್ಚಾಗಿದೆ ಒಂದೇ ದಿನ 16 ಸಾವಿರ ಕ್ಯೂಸೆಕ್ ನಷ್ಟು ಒಳ ಹರಿವಿದ್ದು, ಇಂದು ( ಜು.5) 16,171 ಕ್ಯೂಸೆಕ್ ಒಳ ಹರಿವು ಹೊಂದಿದೆ. ಇನ್ನು ತುಂಗಾಭದ್ರ ನದಿಗೆ ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ನದಿ ಪಂಪ್ ಸೆಟ್ ಮೂಲಕ ಕೃಷಿ ಮಾಡುತ್ತಿರುವ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರು, ನದಿ ಉಕ್ಕಿ ಹರಿಯುತ್ತಿರುವುದನ್ನು ಕಂಡು ಸಂತಸಗೊಂಡಿದ್ದಾರೆ.
ಕಳೆದ ವರ್ಷ ಮುಂಗಾರು ಬೆಳೆಗೂ ಸಹ ಸಮಪರ್ಕ ನೀರು ಸಿಕ್ಕಿರಲಿಲ್ಲ. ಅದರಲ್ಲೂ ಬೇಸಿಗೆ ಹಂಗಾಮಿನಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡಿದ್ದರು. ಈ ಬಾರಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮುಂಗಾರು ಪ್ರವೇಶ ಪಡೆದು ಒಂದು ತಿಂಗಳು ಕಳೆದಿದೆ. ಇನ್ನೂ ಎರಡು ತಿಂಗಳು ಇದೇ ರೀತಿ ಜೋರು ಮಳೆಯಾಗಲಿ ಎಂಬುದು ರೈತರ ಆಶಯವಾಗಿದೆ.