ದಾವಣಗೆರೆ: ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ 2,232 ಎಕರೆ ಭತ್ತದ ಬೆಳೆ ಹಾನಿಯಾಗಿದೆ, ಸುಮಾರು 3 ಕೋಟಿ 42 ಲಕ್ಷ ರೂ. ಬೆಳೆ ಹಾನಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಶನಿವಾರ ಚನ್ನಗಿರಿ ತಾಲ್ಲೂಕಿನ ಸಿದ್ದನಮಠ, ಮೆದಿಕೆರೆ, ತೊಪೇನಹಳ್ಳಿ, ಮಂಗೇನಹಳ್ಳಿ, ದೇವರಹಳ್ಳಿ ಹಾಗೂ ಕಗತೂರು ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆ ಮಳೆ 100 ಮೀ.ಮೀ ಇದ್ದು, 170 ಮೀ.ಮೀ ಹೆಚ್ಚಿನ ಮಳೆಯಾಗಿದೆ, ಹಾಗಾಗಿ ಭತ್ತ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದೆ. ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ಹಾಳಾಗಿದೆ. ಸಂಬಂಧಪಟ್ಟ ಎಲ್ಲಾ ರೈತರ ಖಾತೆಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ 13,500 ರೂ. ಬೆಳೆ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ ಯಾವುದೇ ರೀತಿಯಲ್ಲಿ ಎಲ್ಲೂ ಕೂಡ ಲೋಪ ಆಗದಂತೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು, ಹಿಂದಿನವರ್ಷ 3 ಸಾವಿರ ರೈತರಿಗೆ 3 ಕೋಟಿ ಪರಿಹಾರ ನೀಡಲಾಗಿದೆ ಎಂದರು.
ಹಾನಿಗೊಳಗಾದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಮಗ್ರ ವರದಿ ತಯಾರಿಸಿ ಆದಷ್ಟು ಬೇಗ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ದೊರಕಿಸುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ದಾವಣಗೆರೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿವೆ, ಆದ್ದರಿಂದ ಜವಾಬ್ದಾರಿಯುತವಾಗಿ ಗಮನಹರಿಸಿ ಸರ್ಕಾರವು ಘೋಷಿಸಿದಂತೆ ಸೂಕ್ತ ರೀತಿಯಲ್ಲಿ ಪರಿಹಾರ ತಲುಪುವಂತೆ ಎಚ್ಚರಿಕೆ ವಹಿಸಲಾಗುವುದು ಹಾಗೂ ಸುಮಾರು 500 ಎಕರೆಯಷ್ಟು ಮಾವಿನ ಬೆಳೆ ಹಾಳಗಿದ್ದು ಆ ರೈತರಿಗೆ ನಿಯಮಾನುಸಾರ ಪರಿಹಾರ ವಿತರಿಸಲಾಗುವುದು ಎಂದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ನಿಗಮದ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲ್ಲೂಕು ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆ ಬೆಳೆಯುವ ಪ್ರದೇಶವಾಗಿದೆ. ಕೆಲವೆಡೆ ಮಾವಿನ ಬೆಳೆ ಕೂಡ ಹಾನಿಗೊಳಗಾಗಿದೆ, ಹಾನಿಯ ಕುರಿತು ವರದಿ ತಯಾರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಾನಿಗೊಳಗಾದ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸದರಾದ ಡಾ.ಜಿ.ಎಂ ಸಿದ್ದೇಶ್ವರ, ಜಿ.ಪಂ ಸಿಇಓ ಡಾ.ಎ.ಚನ್ನಪ್ಪ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಚನ್ನಗಿರಿ ತಹಶೀಲ್ದಾರ್ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಇತರರು ಹಾಜರಿದ್ದರು.