Connect with us

Dvgsuddi Kannada | online news portal | Kannada news online

ದಾವಣಗೆರೆ: ಏ.22ರಿಂದ ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭ; ಹಿಜಾಬ್ ಕುರಿತು ಹೈಕೋರ್ಟ್ ಆದೇಶ ಕಡ್ಡಾಯ ಪಾಲನೆ

ದಾವಣಗೆರೆ

ದಾವಣಗೆರೆ: ಏ.22ರಿಂದ ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭ; ಹಿಜಾಬ್ ಕುರಿತು ಹೈಕೋರ್ಟ್ ಆದೇಶ ಕಡ್ಡಾಯ ಪಾಲನೆ

ದಾವಣಗೆರೆ: ಏ. 22 ರಿಂದ ಮೇ.18ರವರೆಗೆ ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು, ವ್ಯವಸ್ಥಿತವಾಗಿ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ಎಲ್ಲರೂ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಕುರಿತು ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಪಿಯು ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 19855 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು. ಈ ಹಿಂದೆ ಎಲ್ಲಾ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಿದ ಹೆಮ್ಮೆ ನಮ್ಮ ಜಿಲ್ಲೆಗಿದೆ ಹಾಗಾಗಿ ಸರ್ಕಾರ ಮಾರ್ಗದರ್ಶನದಂತೆ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ವಿಚಕ್ಷಣಾ ಜಾಗೃತ ದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧವಿದ್ದು, ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮೆರಾ ಇಲ್ಲದ ಬೇಸಿಕ್ ಮೊಬೈಲ್ ಬಳಸಬಹುದಾಗಿದೆ. ಉಳಿದ ಸಿಬ್ಬಂದಿಗಳಿಗೆ ಮೊಬೈಲ್ ಬಳಸಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರದ 100 ಮೀ ಸುತ್ತಳತೆಯಲ್ಲಿ ಜೆರಾಕ್ಸ್ ಮತ್ತು ಕಂಪ್ಯೂಟರ್ ಸೈಬರ್ ಸೆಂಟರ್‌ ಗಳು ತೆರೆಯುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಳೇ ಪ್ರಶ್ನೆ ಪತ್ರಿಕೆಗಳನ್ನು ಹರಿಬಿಟ್ಟು ಗೊಂದಲ ಸೃಷ್ಠಿಸುವವರ ಕುರಿತು ಜಾಗೃತಿ ವಹಿಸಬೇಕು. ಯಾವುದೇ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂರಿಸಿ ಪರೀಕ್ಷೆ ಬರೆಸುವಂತಿಲ್ಲ. ಎಲ್ಲಾ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಅಕ್ರಮಗಳು ನಡೆಯುವುದು ಕಂಡು ಬಂದಲ್ಲಿ ಸಿಆರ್‍ಪಿಸಿ 107-110 ರಡಿ ಕ್ರಮಕೈಗೊಳ್ಳಲಾಗುವುದು. ಸುತ್ತಲೂ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಯಾವುದೇ ಧ್ವನಿವರ್ದಕಗಳನ್ನು ಬಳಸುವಂತಿಲ್ಲ, ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಗಳಿಗೆ ಬಿಟ್ಟು ಹೋಗಲು ಬಂದಾಗ ಗೇಟ್‍ವರೆಗೆ ಮಾತ್ರ ಅವರಿಗೆ ಪ್ರವೇಶ ನೀಡಬೇಕು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಹೊರತು ಪಡಿಸಿ ಬೇರೆಯವರಿಗೆ ಕೇಂದ್ರದ ಒಳಗೆ ಪ್ರವೇಶ ಮಾಡಲು ಅವಕಾಶ ನೀಡಬಾರದು. ಕೇಸರಿ ಶಾಲು ಹಾಗೂ ಹಿಜಾಬ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಕೇಂದ್ರದ ವ್ಯಾಪ್ತಿಯ ಇನ್ ಸ್ಪೆಕ್ಟರ್‍ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ಎಲ್ಲರೂ ಹೈಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಡಿ.ಡಿ.ಪಿ.ಯು ಶಿವರಾಜ ಎಂ. ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಯಶಸ್ವಿಯಾಗಿ ಪರೀಕ್ಷೆಗಳು ನಡೆಯಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲಾ ಮುಂಜಾಗೃತ ಕ್ರಮ ವಹಿಸಲಾಗಿದೆÉ. ಪರೀಕ್ಷಾ ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಇನ್ನಿತರೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾವುದು ಎಂದರು.
ಸಭೆಯಲ್ಲಿ ಖಜಾನಾಧಿಕಾರಿ ಪ್ರಭಾವತಿ, ರೂಟ್ ಆಫೀಸರ್ಸ್, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಇತರರು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top