ದಾವಣಗೆರೆ: ಸೆ. 18, 19ರಂದು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಸೆ. 18ರಂದು ಸಂಜೆ ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಬಳಿಕ ಕೋರ್ ಕಮಿಟಿ ಸಭೆ ಜರುಗಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಮಾಜಿ ಸಿಎಂ ಯಡಿಯೂರಪ್ಪ, ಎಲ್ಲಾ ಸಚಿವರು, ಶಾಸಕರು, ಎಂಎಲ್‌ಸಿ ಗಳು, ಸಂಸದರು, ಕೇಂದ್ರದ ನಾಲ್ವರು ಸಚಿವರು ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ 574 ಅಪೇಕ್ಷಿತರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪಕ್ಷ ಸಂಘಟನೆ, ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯನ್ನು ಬೂತ್ ಮಟ್ಟದಲ್ಲಿ ತಲುಪಿಸಲು ಕಾರ್ಯ ತಂತ್ರ ರೂಪಿಸಲಾಗುವುದು. ಬೆಳಗಾವಿ, ಕಲ್ಬುರ್ಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ, ಪಕ್ಷ ಸಂಘಟನೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು, ಸಿಎಂ ಬಸವರಾಜ್ ಬೊಮ್ಮಾಯಿ ಕೈಬಲಪಡಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ.
ಸೆಪ್ಟಂಬರ್ 19ರಂದು ತ್ರಿಶೂಲ್ ಕಲಾಭವನದಲ್ಲಿ ಸಭೆ ಸಭೆ ನಡೆಯಲಿದ್ದು, ಬೆಳಿಗ್ಗೆ 11 ಗಂಟೆಯೊಳಗೆ ಬಿಜೆಪಿ ಕಾರ್ಯಕಾರಿಣಿ ಸಭೆಯ ಉದ್ಘಾಟನೆ ನೆರವೇರಲಿದೆ. ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಸಭೆ ಕೊರೊನಾ ಮಾರ್ಗಸೂಚಿ ಅನ್ವಯ ನಡೆಯಲಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಕಾರ್ಯಕಾರಿಣಿ ಶಿವಮೊಗ್ಗ, ಮಂಗಳೂರಿನಲ್ಲಿ ನಡೆದಿಧದರೂ ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ. ಹಲವು ವರ್ಷಗಳ ಬಳಿಕ ದಾವಣಗೆರೆಯಲ್ಲಿ ಸಭೆ ನಡೆಯಲಿದ್ದು, ಇದೊಂದು ಮಹತ್ವದ ಸಭೆಯಾಗಿದೆ. ಈ ಸಭೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಈ ಬಗ್ಗೆ ದಾವಣಗೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯಮಟ್ಟದ ಕಾರ್ಯಕಾರಿಣಿ ನಡೆಯುತ್ತಿರುವುದರಿಂದ ದಾವಣಗೆರೆಯನ್ನು ಅಲಂಕಾರಗೊಳಿಸಲಾಗುವುದು. ರಾತ್ರಿ ವೇಳೆ ವಿದ್ಯುದಲಂಕಾರ ಮಾಡಲಾಗುವುದು. ಇದೆಲ್ಲದೆ ನಗರದೆಲ್ಲಡೆ ಬಿಜೆಪಿ ಧ್ವಜ, ಬಂಟಿಂಗ್ಸ್, ಬ್ಯಾನರ್, ಕಟೌಟ್ ಹಾಕಲಾಗುವುದು. ಈಗಾಗಲೇ ನಾಯಕರ ವಾಸ್ತವ್ಯಕ್ಕೆ 400 ರೂಂ ಬುಕ್ ಮಾಡಲಾಗಿದೆ. ಜನರು ಈ ಕಾರ್ಯಕಾರಿಣಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.



