ದಾವಣಗೆರೆ: ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮತ್ತೊಮ್ಮೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಕಿಡಿಕಾರಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಮಾತನಾಡಿ ಶಿವಶಂಕರಪ್ಪ ಉಚ್ಚಾಟಿಸಲಿಲ್ಲ, ಕಾಂಗ್ರೆಸ್ ಪರ ಮಾತನಾಡಿದ ನನ್ನ ಉಚ್ಚಾಟನೆ ಮಾಡಿದರು ಎಂದರು.
ಅಹಿಂದ ಮತಗಳಿಂದ ಗೆದ್ದವರು. ಅಹಿಂದ ಪರ ನಿಲ್ಲಲಿಲ್ಲ ಎಂಬ ಹೇಳಿಕೆ ನೀಡಿದ್ದಕ್ಕೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು.ಶಾಮನೂರು ಶಿವಶಂಕರಪ್ಪ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಪರ ಮಾತನಾಡಿದರೆ ಉಚ್ಚಾಟನೆ ಮಾಡಲಿಲ್ಲ. ನಾನು ಕಾಂಗ್ರೆಸ್ ಪರ ಮಾತನಾಡಿದ್ದಕ್ಕೆ ಉಚ್ಚಾಟಿಸಿದರು ಎಂದು ಹೊನ್ನಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ದುಡ್ಡು, ಆಮೀಷ ಇಲ್ಲದೆ ಮತ ತೆಗೆದುಕೊಂಡಿದ್ದೇನೆ. ನಾನು ಎಲ್ಲಿಯೂ ಹೋಗಿಲ್ಲ. ದಾವಣಗೆರೆಯಲ್ಲಿ ಕೆಲಸ ಮುಂದುವರಿಸಿದ್ದೇನೆ. ಜಿಲ್ಲೆಯ 8 ಕ್ಷೇತ್ರಗಳ ಹರಿಹರ, ಹೊನ್ನಾಳಿ, ದಾವಣಗೆರೆ ಉತ್ತರ, ಹರಪನಹಳ್ಳಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜಗಳೂರು, ಚನ್ನಗಿರಿಯಲ್ಲಿಯೂ ಕಾರ್ಯಕ್ರಮ ಮಾಡುತ್ತೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯರು ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದರೂ ಜನರಿಗೋಸ್ಕರ ಹೋರಾಟ ಮಾಡ್ತಿದ್ದೇನೆ. ಸ್ವಾಭಿಮಾನಿ ಬಳಗ ಸ್ಥಾಪನೆ ಮಾಡಲಾಗಿದೆ. ಅಹಿಂದ ವರ್ಗದವರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಾದರೆ ಸ್ವಾಭಿಮಾನಿ ಬಳಗ ಸ್ಥಾಪನೆ ಅಗತ್ಯ. ಹಾಗಾಗಿ ಸ್ವಾಭಿಮಾನಿ ಬಳಗ ಶುರು ಮಾಡಿದೆ. ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ಹೇಳಿದರು.