ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಳಿಕ, ಜಿಲ್ಲಾ ಬಿಜೆಪಿ ಒಡೆದ ಮನೆಯಂತಾಗಿದೆ. ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ. ಬಹಿರಂಗವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹರ ಶಾಸಕ ಹರೀಶ್ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂದು ಆರೋಪಿಸಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯತ್ರಿ ಸಿದ್ದೇಶ್ವರ್ ಪತಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿದೆ. ಇದು ಸತ್ಯವಾದ ಮಾತು. ಚುನಾವಣೆಯಲ್ಲಿ ರಾಜ್ಯ ನಾಯಕರು ಬಂದು ನಾಟಕ ಮಾಡಿ ಹೋದರು. ಎಷ್ಟು ನಾಟಕವಾಡಿದರೂ ಅಂದರೆ ನಮಗೆ ಮಾತನಾಡಲು ಕೂಡ ಬಿಡಲಿಲ್ಲ. ಒಂದು ಕಡೆ ಅವರ ಮಾತು ಕೇಳಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು.ಪತ್ನಿ ಗಾಯತ್ರಿ ಸೋಲಿಗೆ ಯಾರು ಕಾರಣ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಸಿದ್ದೇಶ್ವರ ಕಿಡಿಕಾರಿದ್ದಾರೆ.
ನನ್ನ ಬರ್ತ್ಡೇಗೆ ಬರಲಿಲ್ಲ, ಮತದಾರರಿಗೆ ಕೃತಜ್ಞತಾ ಸಮಾರಂಭಕ್ಕೂ ಬರಲಿಲ್ಲ. ಕೃತಜ್ಞತಾ ಸಮಾರಂಭಕ್ಕೆ ಯಾರು ಬಂದಿಲ್ಲವೋ, ಅವರೇ ನಮ್ಮ ಸೋಲಿಗೆ ಕಾರಣ. ಎಲ್ಲಾ ಸಮಾರಂಭಕ್ಕೂ ನಾವು ಅವರನ್ನು ಆಹ್ವಾನ ಮಾಡಿದ್ದರೂ ಬಂದಿಲ್ಲ. ರೇಣುಕಾಚಾರ್ಯ ಮತ್ತು ಅವರ ಟೀಮ್ನಿಂದಲೇ ಸೋಲು ಅನುಭವಿಸಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಳ್ಳೆಯ ಬಜೆಟ್ ನೀಡಿದ್ದಾರೆ. ಯುವಕ, ಯುವತಿಯರು, ಮಹಿಳೆಯರು, ರೈತರು ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.