ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ.ವಿನಯ್ ಕುಮಾರ್ ಗೆ ಟಿಕೆಟ್ ಕೈ ತಪ್ಪಿತ್ತು. ಇದರಿಂದ ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ನಾಮಪತ್ರ ವಾಪಸ್ ಪಡೆಯಲು ನಿನ್ನೆ (ಏ.22) ಕಡೆಯ ದಿನವಾಗಿತ್ತು. ವಿನಯ್ ಕುಮಾರ್ ಕಣದಿಂದ ಹಿಂದೆ ಸರಿಯದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದ್ದು, ನೇರ ಹೊಡೆದ ಭಯ ಆರಂಭವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾ ಮಲ್ಲಿಕಾರ್ಜುನ, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ ಸ್ಪರ್ಧಾ ಕಣದಲ್ಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಸೇರಿ ಒಟ್ಟು 30 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ವಿನಯ್ ಸ್ಪರ್ಧೆಯಿಂದ ಬಿಜೆಪಿ ಮೂಲ ಮತಕ್ಕಿಂತ ಕಾಂಗ್ರೆಸ್ ಮೂಲ ಮತ ಬ್ಯಾಂಕ್ ಗೆ ಕೈ ಹಾಕುವುದು ಪಕ್ಕಾ ಆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ವಿಭಜನೆಯ ಭಯ ಶುರುವಾಗಿದ್ದು, ನೇರ ಹೊಡೆತ ಬೀಳಲಿದೆ. ಕಾಂಗ್ರೆಸ್ ಮತ ವಿಭಜನೆಯಿಂದ ಬಿಜೆಪಿ ಲಾಭದ ಲೆಕ್ಕಾಚಾರದಲ್ಲಿದೆ.
ವಿನಯ್ ಕುಮಾರ್ ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ನಂತರ ಬೆಂಬಲಿಗರು, ಹಿತೈಷಿಗಳ ಸಲಹೆ ಹಾಗೂ ವಿವಿಧ ಗ್ರಾಮಕ್ಕೆ ಭೇಟಿ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿಘೋಷಣೆ ಮಾಡಿದ್ದರು.ಆ ನಂತರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಾಜಿ ಶಾಸಕ ಎಸ್.ರಾಮಪ್ಪ ಸಮ್ಮುಖ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ವಿನಯ್ ಗೆ ಇನ್ನೂ ವಯಸ್ಸು, ಅವಕಾಶ ಇದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಲು ಮಾಡಿದ್ದ ಪ್ರಯತ್ನ ವ್ಯರ್ಥವಾಗಿದೆ.
ನಾಮಪತ್ರ ಹಿಂಪಡೆಯುವಂತೆ ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ಜಿ.ಬಿ.ವಿನಯಕುಮಾರ್‌ರ ದಾವಣಗೆರೆ ನಿವಾಸಕ್ಕೆ ಭೇಟಿ ನೀಡಿ, ಮನವೊಲಿಕೆಗೆ ಮಾಡಿದ ಪ್ರಯತ್ನ ವಿಫಲವಾಗಿತ್ತು. ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ಸಹ ಸಿಎಂ ಆಪ್ತ ವಲಯದಿಂದ ಕೆಲವರು ದಾವಣಗೆರೆಗೆ ಬಂದು ಮನವೊಲಿಸಲು ಮಾಡಿದ್ದ ಪ್ರಯತ್ನ ವಿಫಲವಾಯಿತು. ಕುರುಬ ಸಮಾಜಕ್ಕೆ ಸೇರಿದ ಜಿ.ಬಿ. ವಿನಯ್ ಕುಮಾರ್, ಕಾಂಗ್ರೆಸ್ಸಿನ ಬುಟ್ಟಿಯ ಮತಗಳಿಗೆಯೇ ಕೈ ಹಾಕಿರುವುದು ಕಾಂಗ್ರೆಸ್ ಒತ್ತಡ ಹೆಚ್ಚಿಸಿದೆ. ದಾವಣಗೆತೆ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಸತತ ಸೋಲು ಆಗಿದ್ದು, ಈ ಬಾರಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಅಹಿಂದ ವರ್ಗದ ಮತಗಳ ಮೇಲೆ ಒಂದಿಷ್ಟು ಹೆಚ್ಚಾಗಿಯೇ ಕಾಂಗ್ರೆಸ್ ಅವಲಂಬಿತವಾಗಿದೆ. ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸಹ ಹಿಂದುಳಿದ ವರ್ಗದ ಮತಗಳ ಮೇಲೆ ಕಟ್ಟಿದ್ದಾರೆ. ವಿನಯ್‌ಕುಮಾರ್ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಮಾನ ವೈರಿಗಳಾಗಿ ನೋಡುತ್ತಿದ್ದಾರೆ.
ಎರಡು ಕುಟುಂಬಗಳ ಹಿಡಿತದಿಂದ ದಾವಣಗೆರೆಯನ್ನು ಮುಕ್ತ ಮಾಡಬೇಕು, ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ಕಾರಣಕ್ಕೆ ಅಂತಿಮ ಕಣದಲ್ಲಿದ್ದೇನೆ ಎಂದು ಪದೇಪದೇ ಹೇಳುತ್ತಿದ್ದಾರೆ. ಇಲ್ಲಿವರೆಗೆ ಎರಡು ಕುಟುಂಬಗಳ ನೇರಾನೇರ ಹಣಾಹಣಿ ಎನ್ನುವಂತಾಗಿತಗತು. ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ವಿನಯ್ ಕಣದಲ್ಲಿರುವುದಕ್ಕೆ ಬಿಜೆಪಿ ಲಾಭವಾದ್ರೆ, ಕಾಂಗ್ರೆಸ್ ಗೆ ಮತ ಕಳೆದುಕೊಳ್ಳುವ ಭಯ ಶುರುವಾಗಿದೆ.



