ದಾವಣಗೆರೆ: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಡಾ.ಎಂ.ಪಿ.ದಾರಕೇಶ್ವರಯ್ಯ ಅವರು ಚಿತ್ರದುರ್ಗ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ನಾಮಪತ್ರ ಸಲ್ಲಿಸಿದ್ದು, ಈ ನಾಮಪತ್ರ ಸ್ವೀಕೃತಗೊಂಡಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ , ಸಹೋದರ ಎಂ.ಪಿ. ದಾರಕೇಶ್ವರಯ್ಯ ಆವರಿಂದ ನಾಮಪತ್ರ ವಾಪಸ್ ತೆಗೆಸಲಾಗುವುದು. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನನ್ನ ಜೊತೆ ಮಾತನಾಡಿದ್ದು, ಸಾಮಾಜಿಕವಾಗಿ ಅವರಿಗೆ ನ್ಯಾಯ ಕೊಡಿಸಬೇಕು. ವಾಪಸ್ ಪಡೆಯಲು ಸಹೋದರನಿಗೆ ಹೇಳುತ್ತೇನೆ ಎಂದರು.
ನಮಗೆ ಸಮಾಜದಲ್ಲಿ ನಮ್ಮದೇ ಆದ ಗೌರವವಿದೆ. ಅದನ್ನು ನಾವು ಉಳಿಸಿಕೊಂಡು ಹೋಗಬೇಕೇ ವಿನಃ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ನಮಗೆ ಎಸ್ ಸಿ ಸರ್ಟಿಫಿಕೇಟ್ ಬೇಡ. ಅದರಿಂದ ರಾಜಕಾರಣ ಮಾಡುವ ಅವಶ್ಯಕತೆಯೂ ನಮಗಿಲ್ಲ. ಹಿಂದೆ ನನ್ನ ಮಗಳ ಮೇಲೆಯೂ ಆರೋಪ ಬಂದಿತ್ತು ಎಂದರು.
ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕ್ಷೇತ್ರದಲ್ಲಿ ನಿತ್ಯ ಎಲ್ಲೆಡೆ ಪ್ರಚಾರ ಮಾಡುತ್ತಿದ್ದೇನೆ. ಮೋದಿ ನಾಮಬಲದಿಂದ ಗೆದ್ದು ಅವರ ಕೈಬಲ ಪಡಿಸಬೇಕಾಗಿದೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಹೆಸರು ಹೇಳಲು ನಮಗೆ ಯಾವ ಹಿಂಜರಿಕೆ ಇಲ್ಲ. ಅಭ್ಯರ್ಥಿಯೊಂದಿಗೆ ಪ್ರಚಾರಕ್ಕೆ ಶೀಘ್ರ ದಿನಾಂಕ ನಿಗದಿ ಮಾಡುತ್ತೇವೆ ಎಂದರು.



