ದಾವಣಗೆರೆ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯ ಆರಂಭವಾಗಲಿದ್ದು, ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಪರಿಕರಗಳಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕ್ರಮ ವಹಿಸಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಕೃಷಿ ಅಧಿಕಾರಿಗಳಿಗೆ ಸೂಚಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಪೂರ್ವಸಿದ್ದತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ್ ಮತ್ತು ಜುಲೈ ಮಾಹೆಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ಗೊಬ್ಬರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಕೃಷಿ ಜಂಟಿ ನಿರ್ದೇಶಕರು ನೋಡಿಕೊಳ್ಳಬೇಕು. ಏನಾದರೂ ಕೊರತೆ ಇದ್ದರೆ ನನಗೆ ತಿಳಿಸಬೇಕು. ಶೀಘ್ರವೇ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 2,44,297 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಇದೆ. ಪ್ರಮುಖ ಬೆಳೆಗಳಾದ ಭತ್ತ 66037 ಹೆ, ಜೋಳ 2400 ಹೆ, ಮುಸಿಕಿನ ಜೋಳ 126708 ಹೆ, ರಾಗಿ 7295 ಹೆ, ತೊಗರಿ 7215 ಹೆ, ಶೇಂಗಾ 13775 ಹೆ, ಸೂರ್ಯಕಾಂತಿ 2190 ಹೆ, ಹತ್ತಿ 10327 ಹೆ ಮತ್ತು ಕಬ್ಬು 1529 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದೆ. ಕೃಷಿ ಇಲಾಖೆಯ 20 ರೈತ ಸಂಪರ್ಕ ಕೇಂದ್ರಗಳು ಹಾಗೂ 10 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಹಾಗೂ ಕಾಪು ದಾಸ್ತಾನು ಸಂಸ್ಥೆಯವರೊಡನೆ ಸಭೆ ನಡೆಸಲಾಗಿದೆ.
ಲಾಕ್‍ಡೌನ್ ಅವಧಿಯಲ್ಲಿ ಲಾರಿ ಮಾಲೀಕರ ಸಂಘದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಸಗೊಬ್ಬರಗಳ ಸುಗಮ ಸರಬರಾಜಿಗೆ ಕ್ರಮ ವಹಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು ಮತ್ತು ಕೃಷಿ ಯಂತ್ರಧಾರೆ ಕೇಂದ್ರದವರಿಗೆ 534 ಗ್ರೀನ್ ಪಾಸ್ ವಿತರಿಸಲಾಗಿದೆ ಎಂದರು.
ಬಿತ್ತನೆ ಬೀಜ ವಿವರ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಬೇಡಿಕೆ 40521 ಕ್ವಿಂಟಾಲ್ ಇದ್ದು ಪ್ರಸ್ತುತ 35515.50 ಕ್ವಿಂಟಾಲ್ ದಾಸ್ತಾನಿದೆ. ಇದರಲ್ಲಿ 35.52 ಕ್ವಿಂಟಾಲ್ ವಿತರಣೆಯಾಗಿದೆ. ಬಿತ್ತನೆ ಬೀಜದ ಕೊರತೆಯಿಲ್ಲ ಎಂದರು.
ಗೊಬ್ಬರ ದಾಸ್ತಾನು : ಪ್ರಸಕ್ತ ಸಾಲಿನ ಮೇ ಮಾಹೆಗೆ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಎಂಓಪಿ ಮತ್ತು ಎಸ್‍ಎಸ್‍ಪಿ ಸೇರಿ ಒಟ್ಟು 22650 ಟನ್ ಬೇಡಿಕೆ ಇದ್ದು ಪ್ರಸ್ತುತ 38557 ಟನ್ ದಾಸ್ತಾನು ಇದೆ. ಮುಂಗಾರು ಹಂಗಾಮಿಗೆ ಯೂರಿಯಾ, ಡಿಎಪಿ ಮತ್ತು ಕಾಂಪ್ಲೆಕ್ಸ್ ಗೊಬ್ಬರ ಕೆಎಸ್‍ಸಿಎಂಎಫ್‍ನಲ್ಲಿ 7100 ಟನ್ ಮತ್ತು ಕೆಎಸ್‍ಎಸ್‍ಸಿ ಯಲ್ಲಿ 7350 ಸೇರಿ ಒಟ್ಟು 14450 ಟನ್ ದಾಸ್ತಾನು ಆಗುತ್ತಿದೆ.
ಬೆಳೆ ಹಾನಿ ವಿವರ : 2020-21 ನೇ ಸಾಲಿಗೆ ಬೇಸಿಗೆ ಹಂಗಾಮಿನಲ್ಲಿ ಹರಿಹರ ತಾಲ್ಲೂಕಿನಲ್ಲಿ 910.80 ಹೆಕ್ಟೇರು ಪ್ರದೇಶದಲ್ಲಿ ಒಟ್ಟು ರೂ.1.22 ಕೋಟಿ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 26.00 ಹೆ.ಪ್ರದೇಶದಲ್ಲಿ 0.03 ಕೋಟಿ ಸೇರಿದಂತೆ ಒಟ್ಟಾರೆ 936.80 ಹೆ. ಪ್ರದೇಶದಲ್ಲಿ ರೂ.1.25 ಕೋಟಿ ಹಾನಿ ಸಂಭವಿಸಿದ್ದು ವರದಿ ಸಿದ್ದಪಡಿಸಿ ಪರಿಹಾರ ಸಾಫ್ಟ್‍ವೇರ್‍ನಲ್ಲಿ ಅಪ್‍ಡೇಟ್ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿ ಪರಿಕರ ಮಾರಾಟಗಾರರು ಮಾತನಾಡಿ, ಬೀಜ, ಗೊಬ್ಬರ ಪರಿಕರ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಸಮಯು ನಿಗದಿ ಮಾಡಲಾಗಿದೆ. ಆದರೆ ಇವುಗಳ ದಾಸ್ತಾನು ದಿನದ ಬೇರೆ ಸಮಯದಲ್ಲೂ ಬರಬಹುದಾಗಿದ್ದು ಅನ್‍ಲೋಡಿಂಗ್‍ಗೆ ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಸಂಸದರು ಪ್ರತಿಕ್ರಿಯಿಸಿ ಡಿಐಪಿ ಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ಕೇಂದ್ರದ ರಸಗೊಬ್ಬರ ಸಚಿವರು ಹಳೇ ದಾಸ್ತಾನಿಗೆ ಹಳೇ ದರದಲ್ಲೇ ಮಾರಾಟ ಮಾಡಬೇಕೆಂದು ತಿಳಿಸಿದ್ದಾರೆ. ಹಾಗೂ ಸರ್ಕಾರ ನಿಗದಿಪಡಿಸಿದ ದರದಲ್ಲೇ ಗೊಬ್ಬರ ಮಾರಾಟ ಆಗಬೇಕು. ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಸಂಬಂಧಿಸಿದಂತೆ ರೈತರಿಂದ ಯಾವುದೇ ದೂರು ಬಾರದಂತೆ ನಿರ್ವಹಣೆ ಮಾಡಬೇಕೆಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ ಹಳೇ ದಾಸ್ತಾನು ಖಾಲಿಯಾಗಿದ್ದು, ಡಿಐಪಿ ಗೊಬ್ಬರ ದರ ಪರಿಷ್ಕರಣೆಯ ಅಧಿಕೃತ ಆದೇಶ ಬಂದಿದೆ. ಅದೇ ಪ್ರಕಾರ ಮಾರಾಟ ಮಾಡಲಾಗುತ್ತಿದೆ. ಡಿಐಪಿ ಗೊಬ್ಬರ ಐಪಿಎಲ್ ಬ್ರಾಂಡ್ ರೂ.1200 ರಿಂದ 1900 ಕ್ಕೆ ದರ ಹೆಚ್ಚಾಗಿದೆ. ಇಫ್ಕೋ 1300 ರಿಂದ 1900 ಮತ್ತು ಎಂಸಿಎಫ್ 1200 ರಿಂದ 1700 ಹೀಗೆ ಹೆಚ್ಚಿಗೆ ಆಗಿದೆ. ಡಿಐಪಿ ಬಳಕೆ ಕಡಿಮೆ ಮಾಡಲು 20.20.0.13 ಮತ್ತು 10.26.26 ಗೊಬ್ಬರದ ಪ್ರಮಾಣವನ್ನು ಲೆಕ್ಕ ಹಾಕಿ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದ್ದು ಇದರಿಂದ ರೈತರಿಗೆ ಚೀಲಕ್ಕೆ 200 ರಿಂದ ರೂ.300 ಕಡಿಮೆ ಆಗುತ್ತದೆ ಎಂದರು.
ಸಂಸದರು, ಪ್ರತಿಕ್ರಿಯಿಸಿ ಒಟ್ಟಾರೆ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಬೀಜ, ಗೊಬ್ಬರ ಸೇರಿದಂತೆ ಇತರೆ ವ್ಯವಸ್ಥೆ ಮಾಡಬೇಕು. ಹಾಗೂ ಏನೇ ಕೊರತೆ ಇದ್ದರೂ ನನ್ನ ಗಮನಕ್ಕೆ ತರಬೇಕೆಂದ ಅವರು ಎಪಿಎಂಸಿ ಮತ್ತು ಗೂಡ್‍ಶೆಡ್ ಹಮಾಲರಿಗೆ ಎಪಿಎಂಸಿ ಮತ್ತು ಆಹಾರ ಇಲಾಖೆಯವರು ಪಾಸ್ ನೀಡಬೇಕೆಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಮಾತನಾಡಿ, ಬಾಳೆ, ಮಾವು, ನಿಂಬೆ, ಕಲ್ಲಂಗಡಿ, ಪಪ್ಪಾಯ, ದಾಳಿಂಬೆ, ಪೇರಲೆ ಮತ್ತು ಸಪೋಟ ಸೇರಿ ಒಟ್ಟಾರೆ 2081 ಹೆಕ್ಟೇರ್ ಪ್ರದೇಶದಲ್ಲಿ 29131 ಮೆಟ್ರಿಕ್ ಟನ್ ಬೆಳೆಯಲಾಗಿದೆ. ಇದರಲ್ಲಿ ಹೆಚ್ಚಾಗಿ ಬಾಳೆ 807 ಮತ್ತು ಮಾವು 1148 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು, ಬದನೆ, ಬೆಂಡಕಾಯಿ, ಕೋಸು, ಪರಂಗಿ, ಬೂದುಗುಂಬಳ, ಕ್ಯಾಪ್ಸಿಕಂ ಮತ್ತು ಇತರೆ ತರಕಾರಿಗಳನ್ನು 2922 ಹೆ. ಪ್ರದೇಶದಲ್ಲಿ 79132 ಮೆಟ್ರಿಕ್ ಟನ್ ಬೆಳೆಯಲಾಗಿದೆ ಎಂದರು.
ಮಾವು ಇಳುವರಿ ಮತ್ತು ಮಾರಾಟದಲ್ಲಿ ತೊಂದರೆಯಿಲ್ಲ. ಬಾಳೆ ಇಳುವರಿ ಈಗ ಶುರುವಾಗಿದ್ದು,ಮದುವೆ ಮತ್ತಿತರೆ ಕಾರ್ಯಕ್ರಮಗಳಿಲ್ಲದ ಕಾರಣ ಮಂಡಿಗಳಲ್ಲಿ ಬೇಡಿಕೆಯಿಲ್ಲ. ಉಳಿದಂತೆ ಹಣ್ಣು, ತರಕಾರಿ ಬೆಂಗಳೂರು, ಮಂಗಳೂರು, ತಮಿಳುನಾಡು, ಉಡುಪಿಗೆ ಹೋಗುತ್ತಿದೆ. ಜೊತೆಗೆ ಸ್ಥಳೀಯವಾಗಿ ಕೂಡ ಮಾರಾಟ ಆಗುತ್ತಿದೆ ಎಂದರು.ಸಂಸದರು ಪ್ರತಿಕ್ರಿಯಿಸಿ ಬೇಡಿಕೆ ಇರುವ ಇತರೆಡೆಗೆ ಹಣ್ಣು ಮತ್ತು ತರಕಾರಿ ಕಳುಹಿಸಲು ವ್ಯವಸ್ಥೆ ಮಾಡಿ, ಸ್ಥಳೀಯವಾಗಿ ಕೂಡ ಮಾರಾಟ ಮಾಡಲು ಉತ್ತೇಜನ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಪಾಪಣ್ಣ, ಮಹಾಂತೇಶ, ಕೃಷ್ಣಮೂರ್ತಿ, ಸುರೇಶ್, ಸೋಮಶೇಖರ್, ಇತರೆ ಅಧಿಕಾರಿಗಳು ಇದ್ದರು.