Connect with us

Dvgsuddi Kannada | online news portal | Kannada news online

ದಾವಣಗೆರೆ: ಪಾರದರ್ಶಕ, ನ್ಯಾಯಸಮ್ಮತ ಚುನಾವಣಗೆ ಸಕಲ ಸಿದ್ಧತೆ; ಜಿಲ್ಲೆಯಲ್ಲಿ 14.23 ಲಕ್ಷ ವೋಟರ್; ನೂರು ವರ್ಷ ಮೇಲ್ಪಟ್ಟ 213 ಮತದಾರರು..!

ದಾವಣಗೆರೆ

ದಾವಣಗೆರೆ: ಪಾರದರ್ಶಕ, ನ್ಯಾಯಸಮ್ಮತ ಚುನಾವಣಗೆ ಸಕಲ ಸಿದ್ಧತೆ; ಜಿಲ್ಲೆಯಲ್ಲಿ 14.23 ಲಕ್ಷ ವೋಟರ್; ನೂರು ವರ್ಷ ಮೇಲ್ಪಟ್ಟ 213 ಮತದಾರರು..!

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆ ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 7,13 136 ಪುರುಷರು, 7,09, 9950 ಮಹಿಳೆಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14,23,674 ಮಂದಿ ಹಕ್ಕು ಚಲಾಯಿಸಲಿದ್ದಾರೆ.ಇದರಲ್ಲಿ 213 ನೂರು ವರ್ಷ ದಾಟಿದ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ವರದಿಗಾರರ ಕೂಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 1683 ಮತಗಟ್ಟೆಗಳಿರಲಿವೆ. 80 ರಿಂದ 89 ವರ್ಷ ವಯಸ್ಸಿನ 23,353 ಹಾಗೂ 90 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು 4,007 ಮಂದಿ ಇದ್ದು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ. ಸರ್ವೀಸ್ ವೋಟರ್ಸ್ 471, ಇತರೆ 117 ಮಂದಿ ಮತದಾನ ಮಾಡಲಿದ್ದಾರೆ. ಜಿಲ್ಲೆಯಲ್ಲಿ 213 ಶತಾಯುಷಿಗಳಿರುವುದು ವಿಶೇಷ. ನೂರು ವರ್ಷ ಹಾಗೂ ನೂರು ವರ್ಷ ಮೇಲ್ಪಟ್ಟವರು ಜಗಳೂರು – 18, ಹರಿಹರ – 33, ದಾವಣಗೆರೆ ಉತ್ತರ – 41, ದಾವಣಗೆರೆ ದಕ್ಷಿಣ 30, ಮಾಯಕೊಂಡ – 17, ಚನ್ನಗಿರಿ -43 ಹಾಗೂ ಹೊನ್ನಾಳಿಯಲ್ಲಿ 31 ಶತಾಯುಷಿಗಳಿದ್ದಾರೆ ಎಂದರು.

ಆರೋಗ್ಯವಂತರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶವಿದೆ. ಇಲ್ಲದಿದ್ದರೆ ಆಯೋಗದ ಸೂಚನೆಯಂತೆ ಮನೆ ಬಾಗಿಲಿಗೆ ಹೋಗಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಚಿತ್ರೀಕರಣ ಮಾಡಲಾಗುವುದು. ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಲಾಗುವುದು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1,16,890 ಪುರುಷ, 1,19,060 ಮಹಿಳೆಯರು ಸೇರಿದಂತೆ ಒಟ್ಟು 2,36,034, ದಾವಣಗೆರೆ ದಕ್ಷಿಣದಲ್ಲಿ 1,03,157 ಪುರುಷ, 1,04,109 ಮಹಿಳೆಯರು ಸೇರಿ ಒಟ್ಟು 2,07,342, ಜಗಳೂರಿನಲ್ಲಿ 96,858 ಪುರುಷರು, 94,264 ಮಹಿಳೆಯರು ಸೇರಿದಂತೆ ಒಟ್ಟು 1,91,203, ಹರಿಹರದಲ್ಲಿ 1,02,639 ಪುರುಷರು, 1,02,705 ಸೇರಿ 2,05,435, ಮಾಯಕೊಂಡದಲ್ಲಿ 95,690 ಪುರುಷ 93,865 ಸೇರಿ ಒಟ್ಟು 1,89,681, ಚನ್ನಗಿರಿಯಲ್ಲಿ 99,455 ಪುರುಷ, 98,272 ಮಹಿಳೆಯರು ಸೇರಿದಂತೆ ಒಟ್ಟು 1,97,782 ಹಾಗೂ ಹೊನ್ನಾಳಿಯಲ್ಲಿ 98,447 ಪುರುಷ, 97,675 ಮಹಿಳೆಯರು ಸೇರಿದಂತೆ ಒಟ್ಟು 1,96,197 ಮಂದಿ ಹಕ್ಕು ಚಲಾಯಿಸಲಿದ್ದಾರೆ ಎಂದರು.

ಚುನಾವಣಾ ಸಮಯದಲ್ಲಿ ಸ್ವತ್ತನ್ನು ಯಾವುದೇ ಕಾರಣಕ್ಕೂ ವಿರೂಪಗೊಳಿಸಬಾರದು. ಗೋಡೆ ಬರಹ, ಸಚಿವರ ಸಭೆಗಳು, ಹಿಂಸಾತ್ಮಕ ಘಟನೆಗಳು, ಮತದಾರರನ್ನು ಭಯಪಡಿಸುವುದು, ಸೀರೆಗಳು, ಪಂಜೆಗಳು, ಹೊದಿಕೆಗಳು ಸೇರಿದಂತೆ ಇತರೆ ವಸ್ತುಗಳನ್ನು ಹಂಚಬಾರದು. ಯಾವುದೇಅಭ್ಯರ್ಥಿ ಅಥವಾ ಏಜೆಂಟ್ ಹಣದ ಆಮೀಷ ಒಡ್ಡುವಂತಿಲ್ಲ. ಚುನಾವಣೆ ವೇಳೆ ಜಾತಿ, ಧರ್ಮ, ಪಂಗಡಗಳ ಭಾಷೆ ಹೆಸರಿನಲ್ಲಿ ನಾಗರಿಕರಲ್ಲಿ ದ್ವೇಷ ಭಾವನೆ ಮೂಡುವಂಥ ಪ್ರಚೋದನಕಾರಿ ಚಟುವಟಿಕೆ ಮಾಡುವಂತಿಲ್ಲ. ಮತದಾನ ಮಾಡಲು ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದರು.

ಯಾವುದೇ ವ್ಯಕ್ತಿಯು ಚುನಾವಣಾ ಸಭೆಗಳಲ್ಲಿ ಅಸಭ್ಯ ರೀತಿಯಾಗಿ ವರ್ತಿಸುವಂತಿಲ್ಲ. ಅಸಭ್ಯವಾಗಿ ಇತರರನ್ನು ಟೀಕಿಸುವಂತಿಲ್ಲ. ಹೀಗೆ ಮಾಡಿದರೆ ಆರು ತಿಂಗಳ ಕಾಲ ಕಾರಾಗೃಹ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ ಹೊಸದಾಗಿ ಶಸ್ತ್ರಾಸ್ತ್ರ ಲೈಸೆನ್ಸ್ ನೀಡಲು ನಿಷೇಧಿಸಲಾಗಿದೆ. ಅನಧಿಕೃತ ಶಸ್ತ್ರಾಸ್ತ್ರಗಳು ಹಾಗೂ ಆಯುಧಗಳ ಬಳಕೆ ನಿಷೇಧಿಸಲಾಗುತ್ತದೆ ಎಂದು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷ, ಸಂಘ ಸಂಸ್ಥೆ ಅಥವಾ ವ್ಯಕ್ತಿ, ಹೆದ್ದಾರಿ, ರಸ್ತೆ, ಬೀದಿಗಳು, ಸರ್ಕಾರಿ, ಖಾಸಗಿ ಕಟ್ಟಡಗಳು, ವಿದ್ಯುಚ್ಛಕ್ತಿ, ದೂರವಾಣಿ ಕಂಬದ ಮೇಲೆ ಬ್ಯಾನರ್, ಕಟೌಟ್ ಗಳನ್ನು ಅಳವಡಿಸಲು ಆಯಾ ಸ್ಥಳೀಯ ಪ್ರಾಧಿಕಾರಿಗಳು ಅಂದರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಸ್ಥರಿಂದ ಪರ್ವಾನುಮತಿ ಪಡೆಯಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಭಾರತ ದಂಡ ಸಂಹಿತೆಯ 171 (ಹೆಚ್) ಪ್ರಕರಣ ಮತ್ತು ಸ್ಥಳೀಯ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಪ್ರಿಟಿಂಗ್ ಪ್ರೆಸ್ ಗಳ ಮಾಲೀಕರು ಸಹ ಆಯೋಗ ಸೂಚಿಸಿದ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಸರ್ಕಾರಿ ವಾಹನಗಳಿಗೆ ಚುನಾವಣೆ ವೇಳೆ ಇಂಧನದ ಕೊರತೆಯಾಗದಂತೆ ಪೆಟ್ರೋಲ್ ಬಂಕ್ ಗಳಲ್ಲಿ ಕನಿಷ್ಠ ಪ್ರಮಾಣದ ಡೀಸೆಲ್ ಹಾಗೂ ಪೆಟ್ರೋಲ್ ಸಂಗ್ರಹ ಮಾಡಿಕೊಂಡಿರಬೇಕು. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಚುನಾವಣಾ ಸರ್ಕಾರಿ ವಾಹನಗಳಿಗೆ ಮಾರಾಟದಲ್ಲಿ ಆದ್ಯತೆ ನೀಡಬೇಕು. ಪಾಸ್ ಹೊಂದಿರದ ಚುನಾವಣಾ ಪ್ರಚಾರದ ವಾಹನಗಳ ಮಾಲೀಕರು ಇಂಧನ ಲೆಕ್ಕ ನೀಡಬೇಕು. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನಧಿಕೃತವಾಗಿ ಖಾಸಗಿ ವಾಹನಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದ್ದು, ಯಾವುದೇ ವಾಹನಗಳಿಗೆ ಇಂಧನ ಪೂರೈಸುವ ಮುನ್ನ ಪರಿಶೀಲಿಸಿ, ರಶೀದಿಯಲ್ಲಿ ಮೋಟಾರು ವಾಹನಗಳಿಗೆ ಮಾರಾಟಗಾರರ ಮಾರಾಟದ ಪಾವತಿ ನೀಡಬೇಕು ಎಂದು ಹೇಳಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top