ದಾವಣಗೆರೆ: ಬಿಜೆಪಿಗೆ ಸಿದ್ದೇಶ್ವರ ಕೊಡುಗೆ ಏನೂ ಇಲ್ಲ. ಹಣಕ್ಕಾಗಿ ಟೂರಿಂಗ್ ಟಾಕೀಸ್ ಟಿಕೆಟ್ ಹರಿಯದು, ಅಡಿಕೆಗೆ ಮಿಕ್ಸಿಂಗ್, ಚಾಕಿ, ಕಲರ್ ಹಾಕುವ ಕೆಲಸ ಮಾಡುತ್ತಿದ್ದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದೇಶ್ವರ ಟೂರಿಂಗ್ ಟಾಕೀಸ್ನಲ್ಲಿ ಟಿಕೆಟ್ ಹರಿಯದು, ಬೆಂಗಳೂರಿಗೆ ಹೋಗಿ ರೀಲ್ ತರುತ್ತಿದ್ದರು. ಈಗಿನ ರೀತಿ ಆಗ ಇಂಟರ್ ನೆಟ್ ಕನೆಕ್ಷನ್ ಇರಲಿಲ್ಲ. ಮಂಜಣ್ಣ ಮತ್ತು ಸಿದ್ದೇಶ್ವರ ಪಾಲುದಾರಿಕೆಯಲ್ಲಿ ಟೂರಿಂಗ್ ಟಾಕೀಸ್ ನಡೆಸುತ್ತಿದ್ದರು.ಖರ್ಚಿನ ಹಣ ಹೊಂದಿಸಲು ಚಿತ್ರದುರ್ಗಕ್ಕೆ ಹೋಗಿ ಪ್ಯಾಸೆಂಜರ್ ಅನ್ನು ಅಂಬಾಸಿಡರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.
ಎಸ್.ಎ. ರವೀಂದ್ರನಾಥ್ ಬಿಜೆಪಿಗಾಗಿ ಜೀವವನ್ನೇ ಮುಡಿಪಾಗಿಟ್ಟವರು. ಅವರೊಂದಿಗೆ ಕಿಣಿ, ಶಂಕರ ನಾರಾಯಣ, ಸೋಮನಾಥ್ ಅವರಂಥ ಹಿರಿಯರು ಸಂಘಟನೆಗೆ ಶ್ರಮಿಸಿದ್ದರು.ಸಿದ್ದೇಶ್ವರ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ರವೀಂದ್ರನಾಥ್ ನನಗೆ ಅಣ್ಣ ಆಗಬೇಕು. ಅವರು ಮೊದಲಿನಿಂದಲೂ ಪರಿಚಯ. ಸಿಕ್ಕಾಗ ವಿಶ್ವಾಸದಲ್ಲಿ ಮಾತನಾಡಿದರೆ ತಪ್ಪೇನಿದೆ.ಅಡಿಕೆಗೆ ಮಿಕ್ಸಿಂಗ್, ಚಾಕಿ, ಕಲರ್ ಹಾಕುವ ಕೆಲಸ ಮಾಡುತ್ತಿದ್ದರು. ಸಿದ್ದೇಶ್ವರರ ಅಪ್ಪ ಮಲ್ಲಿಕಾರ್ಜುನಪ್ಪ ಒಳ್ಳೆಯ ಮನುಷ್ಯ. ಸಮಾಜದ ಅಧ್ಯಕ್ಷರಾಗಿದ್ದರು. ಈ ಕಾರಣದಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡಿತು. ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಇವನ ಪರಿಶ್ರಮ ಏನಿದೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕಳೆದ 20 ವರ್ಷಗಳಲ್ಲಿ ಒಂದಾದರೂ ಕೆಲಸ ಆಗಿದೆಯಾ? ಕುಂದುವಾಡ ಕೆರೆ ನಾನು ಮಾಡಿಸಿದ್ದು ಅಂತಾ ಹೇಳಿದ್ದಾನೆ. ಮಾಧ್ಯಮದವರು ನೀವೇ ಹೇಳಬೇಕು. ಇಬ್ಬರು ಬಾಡಿಗಾರ್ಡ್ ಇಟ್ಟುಕೊಂಡಿದ್ದಾರೆ. ಇವೆಲ್ಲಾ ನಡೆಯೋಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈಗ ಆಗಿ ಹೋಗಿದೆ, ಸೋತಿದ್ದೇವೆಂಬ ಕಾರಣಕ್ಕೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.
ಭಾನುವಾರ ಭದ್ರಗೆ ಬಾಗಿನ ಭದ್ರಾ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಲಾಗುವುದು. ಜಿಲ್ಲೆಯ ಶಾಸಕರು, ರೈತ ಮುಖಂಡರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಬಾಗಿನ ಸಲ್ಲಿಸಲಾಗುವುದು ಎಂದರು.