ದಾವಣಗೆರೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪಾಲಿಟಿಕ್ಸ್ ಜೋರಾಗಿದ್ದರೆ, ದಾವಣಗೆರೆಯಲ್ಲಿ ಲೋಕಲ್ ಪಾಲಿಟಿಕ್ಸ್ ಗರಿಗೆದರಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಮಾರ್ಚ್ 4ಕ್ಕೆ ಚುನಾವಣೆ ನಿಗದಿಯಾಗಿದೆ.ಬಹುಮತ ಇಲ್ಲದಿದ್ದಾಗಲೂ ಜಿದ್ದಿಗೆ ಬಿದ್ದು ಅಧಿಕಾರ ಹಿಡಿದ ಬಿಜೆಪಿಗೆ, ಈಗ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಸದಸ್ಯ ಬಲ ಇದ್ದಾಗಲೂ ಮೇಯರ್ ಸ್ಥಾನ ಕೈತಪ್ಪುಲಿದೆ. ಮೇಯರ್ ಸ್ಥಾನದ ಮೀಸಲಾತಿ ಬಿಜೆಪಿಗೆ ಕಂಟಕವಾಗಿದೆ.
ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಯಾರು ಪರಿಶಿಷ್ಟ ಪಂಗಡದಿಂದ ಗೆದ್ದಿಲ್ಲ. ಹೀಗಾಗಿ ಬಹುಮತಕ್ಕೆ ಬೇಕಾದ ಎಲ್ಲ ಏರ್ಪಾಡು ಮಾಡಿಕೊಂಡಿರುವ ಬಿಜೆಪಿಗೆ ಮೀಸಲಾತಿ ಕಾರಣದಿಂದ ಮೇಯರ್ ಹುದ್ದೆ ತಪ್ಪುವುದು ಬಹುತೇಕ ಖಚಿತವಾಗಿದೆ. ವಿಪಕ್ಷ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಏರುವುದು ನಿಶ್ಚಯವಾಗಿದೆ.
ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪಮೇಯರ್ ಸ್ಥಾನ ನಿಗದಿಪಡಿಸಿ ಸರ್ಕಾರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿತ್ತು. ಆಗ ದಾವಣಗೆರೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿತ್ತು. ಈ ಮೀಸಲಾತಿ ನಿಯಮ ಪ್ರಶ್ನಿಸ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸವಿತಾ ಕೆ.ಎನ್. ಹೈಕೋರ್ಟ್ ಮೊರೆಹೋಗಿದ್ದರು. ಆಗ ಸರ್ಕಾರ ಪಟ್ಟಿಯನ್ನು ವಾಪಸ್ ಪಡೆದು, ಮೀಸಲಾತಿ ಬದಲಾಯಿಸಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ, ಉಪಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಕಾಂಗ್ರೆಸ್‌ನಲ್ಲಿ ಐದು ಜನ ಪರಿಶಿಷ್ಟ ಪಂಗಡದಿಂದ ಗೆದ್ದಿದ್ದು, ಇವರಲ್ಲಿ ಪೈಪೋಟಿ ಏರ್ಪಟ್ಟಿದೆ. ಸವಿತಾ ಹುಲ್ಲುಮನಿ ಗಣೇಶ್, ಮೀನಾಕ್ಷಿ ಜಗದೀಶ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಕಲ್ಲಳ್ಳಿ ನಾಗರಾಜ್ ಈ ಐವರಲ್ಲಿ ಮೇಯರ್ ಹುದ್ದೆಗೆ ಪೈಪೋಟಿ ಇದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಯಾರ ಕಡೆ ಒಲವು ತೋರಿಸುತ್ತಾರೋ ಅವರು ಮೇಯರ್ ಆಗುವುದು ಪಕ್ಕಾ ಆಗಿದೆ.
ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಎಲ್ಲ ಮಹಿಳೆಯರು ಅರ್ಹರಾಗಿದ್ದಾರೆ. ಈ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲದಿಂದ ತಿಳಿದು ಬಂದಿದೆ. 2019ರಲ್ಲಿ ಪಾಲಿಕೆ ಚುನಾವಣೆ ನಡೆದಾಗ 45ರಲ್ಲಿ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 17ರಲ್ಲಿ ಗೆದ್ದಿತ್ತು. ಐವರು ಪಕ್ಷೇತರರು, ಒಬ್ಬರು ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು.ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂಬ ನಿರೀಕ್ಷೆ ಇತ್ತು. ಆಗ ವಿಧಾನಪರಿಷತ್ ಸದಸ್ಯರ ನೆರವನ್ನು ಬಿಜೆಪಿ ಪಡೆದಿತ್ತು. ಕಾಂಗ್ರೆಸ್ ಸಹ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿದರೂ ಒಟ್ಟು ಬಲಾಬಲ ಒಂದೇ ರೀತಿ ಇತ್ತು. ಆಗ ಕಾಂಗ್ರೆಸ್ ತನ್ನ ಸದಸ್ಯರನ್ನೇ ಉಳಿಸಿಕೊಳ್ಳಲು ವಿಫಲವಾಗಿದ್ದರಿಂದ ಮೇಯರ್ ಚುನಾವಣೆ ಸೋತಿತ್ತು. ಬಿಜೆಪಿ ಅಧಿಕಾರ ಹಿಡಿದಿತ್ತು.
2020 ಹಿಂದಿನ ದಿನ ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿಯೇ ಬಿಜೆಪಿಗೆ ಸೇರಿದ್ದರಿಂದ ಕಾಂಗ್ರೆಸ್ ನಿರಾಸೆ ಅನುಭವಿಸಿತ್ತು. 2022ರಲ್ಲಿ ಜೆ.ಎನ್. ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ವೇತಾ ಶ್ರೀನಿವಾಸ್ ರಾಜೀನಾಮೆ ನೀಡಿ, ಮೇನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. 45 ಸದಸ್ಯರ ಪಾಲಿಕೆಯಲ್ಲಿ ಬಿಜೆಪಿಯಿಂದ 24 (4 ಪಕ್ಷೇತರು ಸೇರಿ), 20 ಕಾಂಗ್ರೆಸ್ ( 1 ಪಕ್ಷೇತರ), ಜೆಡಿಎಸ್ 1 ಸ್ಥಾನ ಬಲ ಹೊಂದಿದೆ.