Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ

ರಾಜ್ಯದಲ್ಲಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು,  ಇಂದು ದಾವಣಗೆರೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಚಾಲನೆ ನೀಡಿದರು.

ಜನರ ಮನೆಯ ಬಾಗಿಲಿಗೇ ಹೋಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.  ಮನೆ ಬಾಗಿಲಿಗೆ ಮಹಾನಗರ ಪಾಲಕೆ ಅಧಿಕಾರಿಗಳು ಬರಲಿದ್ದಾರೆ.  ಈ ಯೋಜನೆ ಮೂಲಕ ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಖಾತೆ ಬದಲಾವಣೆ, ಜನನ, ಮರಣ ಪ್ರಮಾಣ ಪತ್ರ, ಮನೆ ಕಂದಾಯ, ನೀರಿನ ಕಂದಾಯ, ಖಾತೆ ನೋಂದಣಿ, ಬೀದಿ ದೀಪ ಅಳವಡಿಕೆ, ದುರಸ್ತಿ ಸೇರಿದಂತೆ ಹಲವು ಸೇವೆಗಳನ್ನು ಸ್ಥಳದಲ್ಲೇ ಮಾಡಿಕೊಡಲಾಗುವುದು.

ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ಗಾಂಧಿನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ‘ಮನೆ ಬಾಗಿಲಿಗೆ ಮಹಾನಗರಪಾಲಿಕೆ’ ಎಂಬ ವಿನೂತನ ಕಾರ್ಯಕ್ರಮದಿಂದ ಆಡಳಿತ ಯಂತ್ರವೇ ತಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡಲಿದೆ.ಮೂಲಭೂತ ಸೌಕರ್ಯ ಒದಗಿಸುವ ದಿಸೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆ ಮುಂಚೂಣಿಯಲ್ಲಿದ್ದು ಇದೇ ರಾಷ್ಟ್ರದಲ್ಲಿಯೇ ಇದು ಮೊದಲ ಕಾರ್ಯಕ್ರಮ ಎಂದರೂ ತಪ್ಪಾಗಲಾರದು.  ಆ ಮೂಲಕ ಜನರು ಪಾಲಿಕೆ ಕಚೇರಿಗೆ ಅಲೆಯುವುದು ತಪ್ಪುವುದರ ಜೊತೆಗೆ ಕಾಲಮಿತಿಯೊಳಗೆ ತಮ್ಮ ಕೆಲಸಗಳಾಗಲಿವೆ. ಸಾರ್ವಜನಿಕರು ಯಾರೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಜನನ ಮರಣ ಪ್ರಮಾಣ ಪತ್ರ ಸೇರಿದಂತೆ ಖಾತಾ ಎಕ್ಸ್‍ಟ್ರಾಕ್ಟ್, ಕಟ್ಟಡ ನವೀಕರಣ, ಕುಡಿಯುವ ನೀರು ಬೀದಿ ದೀಪದಂತಹ ಸೌಲಭ್ಯಗಳು ದೊರೆಯುವುದರಿಂದ ದಾವಣಗೆರೆ ಜನತೆ ಸುಖ ಸಂತೋಷ ನೆಮ್ಮದಿಯಿಂದ ಇರಬಹುದಾಗಿದೆ ಎಂದರು.

ಈಗಾಗಲೇ  ದಾವಣಗೆರೆ ಮಹಾನಗರಪಾಲಿಕೆಗೆ ರಾಜ್ಯ ಸರ್ಕಾರ ರೂ.125 ಕೋಟಿ ಬಿಡುಗಡೆ ಮಾಡಿದ್ದು ಅದಕ್ಕಾಗಿ ನಾನು ಮಾನ್ಯ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆಡಳಿತ ಯಂತ್ರ ಮತ್ತಷ್ಟು ಚುರುಕು ಪಡೆದು ಪ್ರತಿ ವಾರ್ಡ್ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳಾಗಿ ಎಲ್ಲರಿಗೂ ಸೌಲಭ್ಯಗಳು ಸಿಗಲಿ ಎಂದು ಆಶಿಸಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸುವ ದಿಸೆಯಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಅವರೂ ಕೂಡ ಸಮ್ಮತಿಸಿದ್ದು ದಾವಣಗೆರೆ ನಗರವನ್ನು ಸುಸಜ್ಜಿತ ಜಿಲ್ಲಾಸ್ಪತ್ರೆ ಆಗಲಿದೆ . ಕೊರೊನಾ ಪ್ರಕರಣಗಳು ಇಳಿಗೆ ಕಾಣುತ್ತಿದ್ದು ಸಾವಿನ ಪ್ರಮಾಣವೂ ತಗ್ಗುತ್ತಿದೆ. ಇದೂ ಕೂಡ ಒಳ್ಳೆಯ ಬೆಳೆವಣಿಗೆ. ಅದಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಹಾಗಾಗಿ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ತಮ್ಮೆಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಕೊರೊನಾದಿಂದ ಪಾಲಿಕೆ ಕೆಲಸಗಳಿಗೆ ಹಿನ್ನೆಡೆಯಾಗಿತ್ತು. ಈಗ ಮತ್ತೆ ಕಾಮಗಾರಿಗಳು ವೇಗ ಪಡೆಯಲಿವೆ. ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಬೇಗ ಬೇಗ ಪೂರ್ಣಗೊಳಿಸಬೇಕು ಹಾಗೂ ನಗರದಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕು. ಆಯಾ ವಾರ್ಡ್‍ನ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಗಿಡಗಳ ಆರೈಕೆಯತ್ತ ಗಮನ ನೀಡಬೇಕೆಂದರು.

ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ದಾವಣಗೆರೆ ಮಹಾನಗರಪಾಲಿಕೆಗೆ ರೂ.125 ಕೋಟಿ ಹಣ ಬಂದಿದ್ದು, ನಗರ ಹೆಚ್ಚು ಅಭಿವೃದ್ದಿ ಕಾಣಲಿದೆ. ನಗರದಾದ್ಯಂತ 21 ಸಾವಿರ ಬೀದಿ ದೀಪಗಳಿದ್ದು ಅವುಗಳನ್ನು ಎಲ್.ಇ.ಡಿ ದೀಪಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ 80 ಕ್ಷ ಬರುತ್ತಿದ್ದ ಒಂದು ತಿಂಗಳ ವಿದ್ಯುತ್ ಬಿಲ್‍ನಲ್ಲಿ 50 ಲಕ್ಷ ಉಳಿತಾಯ ಆಗಲಿದೆ. ಇದರೊಂದಿಗೆ 1 ಲಕ್ಷ ಗಿಡಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದ್ದು 1500 ಹಣ್ಣಿನ ಗಿಡ ನೆಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಯಥೇಚ್ಚ ಆಹಾರ ದೊರೆಯಲಿದೆ. ಜೂನ್ ತಿಂಗಳಲ್ಲಿ 95200 ಗಿಡಗಳನ್ನು ನೆಡಲಾಗುತ್ತಿದ್ದು ಹಸಿರು ದಾವಣಗೆರೆ ಆಗಲಿದೆ.ಹೀಗಾಗಿ ದಾವಣಗೆರೆ ಅಭಿವೃದಿಗೆ ಪ್ರತಿ ವಾರ್ಡ್‍ಗೆ ಕನಿಷ್ಟ ರೂ.10 ಕೋಟಿಯಂತೆ ಹಣ ನೀಡಿದರೆ ಸಮಗ್ರವಾಗಿ ಅಭಿವೃದ್ದಿ ಮಾಡಬಹುದಾಗಿದೆ.. ಹಾಗಾಗಿ ಸರ್ಕಾರಿ ಹೆಚ್ಚು ಅನುದಾನ ನೀಡಬೇಕು ಎಂದರು.

ಶಾಸಕರಾದ ಎಸ್.ಎ.ರವೀಂದ್ರನಾಥ ಮಾತನಾಡಿ, ಕೇವಲ ಪ್ರಚರಕ್ಕಾಗಿ ಕಾರ್ಯಕ್ರಮ ಆಗದೇ ಅಭಿವೃದ್ದಿಯ ಕಾರ್ಯಗಳಾಗಬೇಕು, ಅದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕೆಂದರು.

ವೇದಿಕೆಯಲ್ಲಿ ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್, ದೂಢಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಇರೋಧ ಪಕ್ಷದ ನಾಯಕ ನಾಗರಾಜು, ಗಾಂಧಿನಗರ ಪಾಲಿಕೆ ಸದಸ್ಯ ಜಿ.ಡಿ.ಪ್ರಕಾಶ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top