Connect with us

Dvgsuddi Kannada | online news portal | Kannada news online

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ…ಆದರ್ಶವಿಲ್ಲದೇ ಬದುಕಿದರೆ ಬದುಕಿಗೆ ಅವಮಾನ…

ಅಂಕಣ

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ…ಆದರ್ಶವಿಲ್ಲದೇ ಬದುಕಿದರೆ ಬದುಕಿಗೆ ಅವಮಾನ…

ಆರೂಢ ದಾಸೋಹಿ, ದಾನ ಚಿಂತಾಮಣಿ, ಅನುಪಮದಾನಿ, ಮಹಾಶರಣ ಲಿಂಗೈಕ್ಯ ಮಾಗನೂರು ಬಸಪ್ಪನವರು ಸಾಧನೆ ಮತ್ತು ಆದರ್ಶ ಈ ಎರಡನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರಾಗಿದ್ದರು.

ಲಿಂಗಪೂಜೆ-ಜಂಗಮ ದಾಸೋಹ ಇವೆರಡು ಪರಿಕಲ್ಪನೆಗಳು ವ್ಯಕ್ತಿ ಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಲಿಂಗಪೂಜೆಯಿಂದ ಆತ್ಮೋದ್ಧಾರ ಮಾಡಿಕೊಳ್ಳಬೇಕು. ಜಂಗಮ ದಾಸೋಹದ ಮೂಲಕ ಆತ್ಮೋದ್ಧಾರದ ಶಕ್ತಿಯನ್ನು ಲೋಕಕಲ್ಯಾಣಕ್ಕೆ ಬಳಸಬೇಕು. ಅದಕ್ಕಾಗಿಯೇ ಬಸವಣ್ಣವವರು ಎನ್ನ ಲಿಂಗವ್ಯಸನಿ ಜಂಗಮ ಪ್ರೇಮಿ ಎಂದೆನಿಸಯ್ಯಾ… ಎಂದು ಪ್ರಾರ್ಥಿಸುತ್ತಾರೆ. ಹೀಗೆ ಲಿಂಗ ವ್ಯಸನಿ ಜಂಗಮ ಪ್ರೇಮಿಯಾದವರು ಅಪರೂಪ.

ಅಂತಹ ಅಪರೂಪದವರಲ್ಲಿ ಶರಣ ಮಾಗನೂರು ಬಸಪ್ಪನವರೂ ಒಬ್ಬರು. ಆರೂಢ ದಾಸೋಹಿ, ಧರ್ಮ ಚಿಂತಾಮಣಿ ಎಂದೇ ಜನಮಾನಸದಲ್ಲಿ ನೆಲೆ ನಿಂತಿರುವ ಬಸಪ್ಪನವರು, ಬಸವಣ್ಣನವರ ತತ್ವಗಳನ್ನು ಬದುಕಿ ತೋರಿಸಿದವರು. ಆರೂಢ ದಾಸೋಹಿ ಬಿರುದು ಬರಿ ಮಾತಿನ ಬಿರುದಲ್ಲ. ಆರೂಢ ಎಂದರೆ ಜೀವನ್ಮುಕ್ತ. ಎತ್ತರಕ್ಕೆ ಏರಿದವನು. ತತ್ವಜ್ಞಾನಿ ಎನ್ನುವ ಅರ್ಥ ಕೂಡ ಹೌದು. ಬಸಪ್ಪನವರಿಗೆ ದಾನ ಚಿಂತಾಮಣಿ, ಅನುಪಮದಾನಿ ಇವು ಕೇವಲ ಅರ್ಥಗಳಲ್ಲ, ಅನ್ವರ್ಥಗಳು.

ಸಿರಿಗೆರೆ ತರಳಬಾಳು  ಜಗದ್ಗುರು ಬೃಹನ್ಮಠದ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆದವರು. ಜಾತ್ಯಾತೀತವಾಗಿ ದಾವಣಗೆರೆಯಲ್ಲಿ ಎಲ್ಲಾ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಅಭ್ಯುದಯಕ್ಕೆ ನೆರವಾದವರು.

ಈಗ ದಾವಣಗೆರೆಯಲ್ಲಿರುವ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳ (ಬಾಪೂಜಿ ವಿದ್ಯಾಸಂಸ್ಥೆ, ಮೆಡಿಕಲ್ ಕಾಲೇಜು ಇತ್ಯಾದಿ) ಸ್ಥಾಪನೆಯಲ್ಲಿ ಎಲ್ಲಾ ಜನಾಂಗದವರಿಗೆ ವಸತಿ ನಿಲಯಗಳ ಸ್ಥಾಪನೆಯಲ್ಲಿ ಮಾಗನೂರು ಬಸಪ್ಪನವರ ಶ್ರಮ ಅಪಾರವಾದುದು.

ಕಡು ಬಡತನದಲ್ಲಿ ಹುಟ್ಟಿ ಬೆಳೆದ ಈ ಜೀವ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನು, 13ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಈ ಸಂಕಟದಿಂದ ಪಾರಾಗಲು, ಬದುಕು ಕಟ್ಟಿಕೊಳ್ಳಲು ಅವರು ಆಯ್ಕೆ ಮಾಡಿಕೊಂಡದ್ದು, ದೇವನಗರಿ ಎಂಬ ದಾವಣಗೆರೆಯನ್ನು, ಬೇರೆ ಬೇರೆ ಶ್ರೀಮಂತ ವರ್ತಕರ ಅಂಗಡಿಯಲ್ಲಿ ಗುಮಾಸ್ತ ಕೆಲಸ ಮಾಡಿ ತುಂಬಾ ಚತುರತೆಯಿಂದ ಮುಂದೆ ಬಂದ ಬಸಪ್ಪನವರ ವಿದ್ಯಾಭ್ಯಾಸ ಕೇವಲ 7ನೇ ತರಗತಿಯವರೆಗೆ ಮಾತ್ರ. ಬದುಕಿನ ರಂಗವೇ ಅವರ ಪಾಠಶಾಲೆ. ಅವರ ಜೀವನದ ಅನುಭವವೇ ಅವರಿಗೆ ದೊಡ್ಡ ಪಾಠವಾಗಿತ್ತು.

ದಿನಾಂಕ 30.10.2020ರ ಶುಕ್ರವಾರಕ್ಕೆ ಈ ಮಹಾಶರಣನ 25ನೇ ವಾರ್ಷಿಕ ಪುಣ್ಯಸ್ಮರಣೆ. ಬಹು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಯಬೇಕಿದ್ದ ಈ ಪುಣ್ಯಸ್ಮರಣೆಯ ಕಾರ್ಯಕ್ರಮ ಕೊರೊನಾ ಕಾರಣದಿಂದಾಗಿ ಇಲ್ಲದಾಗಿ ಮುಂಬರುವ ದಿನಗಳಲ್ಲಿ ಜರುಗುವುದು.

ಈ ಭೂಮಿಯಲ್ಲಿ ಸರಿ ಸುಮಾರು 95 ವರ್ಷಗಳು ಬೆಳಗಿದಂತಹ ಪುಣ್ಯಾತ್ಮ. ಇಂತಹ ಬಹುಜನಹಿತಾಯ, ಬಹುಜನಸುಖಾಯಕ್ಕೆ ತನ್ನ ಬೆಳಕನ್ನು ಹರಿಸಿದ ಒಂದು ದಿವ್ಯ ಆತ್ಮಜ್ಯೋತಿ ಎಂದರೆ ತಪ್ಪಾಗಲಾರದು. ಜಗತ್ತಿನ ಬದುಕಿನ ಆರಂಭದಿಂದ ಹಿಡಿದು, ಹಲವಾರು ಲೌಖಿಕ ಅಡೆ-ತಡೆಗಳ ಮಧ್ಯೆ ಸಂಕಲ್ಪ-ವಿಕಲ್ಪಗಳಿಂದ ಕೂಡಿದ ವಿವಿಧ ಮನೋಭಾವ ಜನರೊಡನೆ ಕೂಡಿ ಬಾಳಿ ನಾಡಿನ ಜನ ಸಾಮಾನ್ಯರಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹಾನ್ ಚೇತನ. ಸಮಾಜದಲ್ಲಿ ಕೇವಲ ಇವರು ಬಹಿರಂಗ ಸಿರಿವಂತಿಕೆಯನ್ನು ಅಷ್ಟೇ ಗಳಿಸಿರಲಿಲ್ಲ. ಆಂತರಿಕ ಶ್ರೀಮಂತಿಕೆಯನ್ನು ಗಳಿಸಿದ್ದರು.

ತಮ್ಮ ಧಾರ್ಮಿಕ, ಸಾಮಾಜಿಕ, ಆರ್ಥಿಕವಾದ ಧನಾತ್ಮಕ ಮತ್ತು ಸಕಾರಾತ್ಮಕ ಕ್ರಿಯೆಗಳಿಂದ ಅದಮ್ಯ ತೃಪ್ತಿ, ನೆಮ್ಮದಿ ಪಡೆದಿದ್ದರು. ಸಾರ್ವಜನಿಕರ ಹಣವಾಗಲಿ, ಸ್ವತ್ತಾಗಲಿ ಒಂದು ಕವಡೆಯಷ್ಟೂ ತನ್ನ ಮನೆಗೆ ಸೇರಬಾರದು ಎಂದು ಹಂಬಲಿಸಿದ ಜೀವ ಇದು. ಅವರು ಜೀವನದಲ್ಲಿ ಗಳಿಸಿದ್ದ ಸಂಪತ್ತು ಕೇವಲ ಲೌಖಿಕವಾದುದಲ್ಲ. ಅದು ಅಲೌಖಿಕವಾದದ್ದು. ಒಬ್ಬ ತತ್ವಜ್ಞಾನಿಗೆ ಇರಬೇಕಾದ ಸ್ಪಷ್ಟತೆ, ನೈಜತೆ, ನಿಖರತೆ, ಶಿಸ್ತು, ಸಂಪನ್ನತೆ, ಸಂಸ್ಕಾರ, ಸಂಸ್ಕೃತಿ ಇವರ ರಕ್ತದಲ್ಲಿ ಬೆರೆತು ಹೋಗಿದ್ದವು.

ಯಾವ ಡಿಗ್ರಿಯನ್ನು ಸಂಪಾದಿಸದೇ ಬರೀ ಬದುಕಿನ ಪಾಠದಿಂದ ಪಡೆದ ದಿವ್ಯ ಅರಿವಿನಿಂದ ದೈವ ಮಾನವತ್ವ ಪಡೆದ ಈ ವಿವೇಕದ ವ್ಯಕ್ತಿತ್ವಕ್ಕೆ ಪುಣ್ಯಸ್ಮರಣೆಯ ದಿನದಂದು ಶ್ರದ್ಧಾಂಜಲಿ ಅರ್ಪಿಸಿದರೆ ಸಾಲದು. ಅವರು ಬದುಕಿದ ತತ್ವಾದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ನೀಡುವಂತಾಗಲು ಇಂದಿನ ವಿದ್ಯಾರ್ಥಿಗಳಲ್ಲಿ ಈ ಮಾನವೀಯತೆಯ ಮೌಲ್ಯದ ಮೂರ್ತಿಯ ಬಗ್ಗೆ ತಿಳಿಯಲು ತಮ್ಮ ಸ್ಥಳೀಯ ಮಟ್ಟದಲ್ಲಾದರೂ ನಮ್ಮ ವಿಶ್ವವಿದ್ಯಾಲಯಗಳು ಪಠ್ಯವಸ್ತುವಿನ ರೂಪದಲ್ಲಿ ತಿಳಿಸುವ ಪ್ರಯತ್ನ ಮಾಡಬೇಕಿದೆ.

ಸಮಾಜಕ್ಕ ಮಾಗಿದ ಹಣ್ಣಾಗಿ ಸ್ವಾದ ಉಣಬಡಿಸಿದ ಶರಣ ಮಾಗನೂರು ಬಸಪ್ಪನವರ ನೆನಪು ಮಾಸುವ ಮುನ್ನವೇ ಅವರ ಬದುಕಿನ ಕೆಲವು ನೆನಪುಗಳನ್ನು, ಅವರೊಂದಿಗಿನ ಅನುಭವಗಳನ್ನು ಕೃತಿ ರೂಪದಲ್ಲಿ ಹೊರತರುವ ಕಾರ್ಯ ಇದೀಗ ಮುಕ್ತಾಯದ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಮಾಗನೂರು ಬಸಪ್ಪನವರ 25ನೇ ಪುಣ್ಯಸ್ಮರಣೆಯ ಸ್ಮರಣಾರ್ಥ ಪ್ರಕಟಗೊಳ್ಳಲಿರುವ ಸಂಸ್ಮರಣಾ ಗ್ರಂಥವು ಮೌಲಿಕ ಲೇಖನಗಳೊಂದಿಗೆ ಸಂಗ್ರಹಯೋಗ್ಯ ಗ್ರಂಥವಾಗಿ ಹೊರಬರಲಿದೆ. ಒಬ್ಬ ವ್ಯಕ್ತಿ ಸಾಧಾರಣ ಪರಿಸ್ಥಿತಿಯಿಂದ ಅಸಮಾನ್ಯರಾಗಿ ಬೆಳೆದು ಹೆಮ್ಮರವಾದ ನಿದರ್ಶನಕ್ಕೆ ಶರಣ ಮಾಗನೂರು ಬಸಪ್ಪನವರ ಬದುಕು ಕಳಸಪ್ರಾಯವಾಗಿದೆ.

– ಡಾ. ಅನಿತಾ ಹೆಚ್. ದೊಡ್ಡಗೌಡರ್,ಸಹಾಯಕ ಪ್ರಾಧ್ಯಾಪಕರು, ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯ,  ದಾವಣಗೆರೆ. ವೊ: 99021 98655

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

To Top