ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ, ಡಿಜಿಟಲ್ ಪ್ಲಾರ್ಟ್ ಫಾರಂನಲ್ಲಿ ಜಾಹೀರಾತು ನೀಡಲು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿ ಅನುಮೋದನೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಎಂ.ಸಿ.ಎಂ.ಸಿ ಸಮಿತಿ; ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅಧ್ಯಕ್ಷರಾಗಿರುವರು. ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ನೋಡಲ್ ಅಧಿಕಾರಿ, ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಲೆಕ್ಕಾಧಿಕಾರಿ ಗಿರೀಶ್.ಹೆಚ್, ಯು.ಬಿ.ಡಿ.ಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಕೆ.ಎಸ್.ಶ್ರೀಧರ್ ಸದಸ್ಯರಾಗಿದ್ದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ.ಬಿ ಇವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಸಮಿತಿ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು; ರಾಜಕೀಯ ಪಕ್ಷ, ಅಭ್ಯರ್ಥಿಗಳ ರಾಜಕೀಯ ಜಾಹಿರಾತುಗಳನ್ನು ಪ್ರಸಾರ ಪೂರ್ವದಲ್ಲಿ ದೃಢೀಕರಣ ನೀಡುವುದು, ಕಾಸಿಗಾಗಿ ಸುದ್ದಿಯ ಮೇಲ್ವಿಚಾರಣೆ ಹಾಗೂ ತಡೆಯಲು ಕ್ರಮಗಳನ್ನು ಜರುಗಿಸುವುದು. ಮಾಧ್ಯಮದಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿ, ದ್ವೇಷ ಭಾಷಣದ ಮೇಲೆ ನಿಗಾವಹಿಸಿ ವರದಿ ಸಂಗ್ರಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತು ಸೇರಿದಂತೆ ಪೋಸ್ಟ್‍ಗಳ ಮೇಲೆ ಮೇಲ್ವಿಚಾರಣೆ ಮಾಡುವ ಕೆಲಸವನ್ನು ಸಮಿತಿ ಮಾಡಲಿದೆ.
ಜಾಹಿರಾತು ಪ್ರಸಾರಕ್ಕೆ ಅನುಮತಿ ಪಡೆಯುವ ವಿಧಾನ; ಚುನಾವಣಾ ನೀತಿ ಸಂಹಿತೆ ಇರುವುದರಿಂದ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮಗಳಾದ ಟಿ.ವಿ, ಕೇಬಲ್ ಟಿವಿ, ಆಕಾಶವಾಣಿ, ಎಫ್.ಎಂ, ಇ-ನ್ಯೂಸ್ ಪೇಪರ್, ರೇಡಿಯೋ, ವಾಯ್ಸ್ ಎಸ್‍ಎಂಎಸ್, ಬಲ್ಕ್ ಎಸ್.ಎಂ.ಎಸ್, ಸಿನಿಮಾ ಹಾಲ್, ಡಿಜಿಟಲ್ ಡಿಸ್ಪ್ಲೆ, ಯುಟ್ಯೂಬ್, ವೆಬ್‍ಸೈಟ್ಸ್, ಸಾಮಾಜಿಕ ಜಾಲತಾಣ ವೆಬ್‍ಸೈಟ್‍ನಲ್ಲಿ ಜಾಹಿರಾತು ನೀಡಲು ಎಂ.ಸಿ.ಎಂ.ಸಿ.ಯಿಂದ ನೀಡುತ್ತಿರುವ ಜಾಹಿರಾತಿಗೆ ಪ್ರಸಾರಕ್ಕೂ ಮುನ್ನ ಪೂರ್ವಾನುಮತಿ ಪಡೆಯಬೇಕು. ಅನುಮತಿಗಾಗಿ ಅನುಬಂಧ-ಎ ರಡಿ ಅನುಮತಿ ಪಡೆದುಕೊಳ್ಳಬೇಕು.
ಅನುಮತಿಗಾಗಿ ಅರ್ಜಿಯೊಂದಿಗೆ ಪ್ರಸಾರ ಮಾಡಲು ಉದ್ದೇಶಿಸಿರುವ ಯಥಾವತ್ತು ಜಾಹಿರಾತು ಅನುವಾದ ಮಾಡಿದ ಬೆರಳಚ್ಚು ಮಾಡಿದ ದೃಢೀಕೃತ ಎರಡು ಪ್ರತಿ ಮತ್ತು ಎರಡು ಸಿಡಿ ಅಥವಾ ಪೆನ್‍ಡ್ರೈವ್‍ನಲ್ಲಿ ಜಾಹಿರಾತನ್ನು ಹಾಕಿ ನೀಡಬೇಕು.
ಸಮಯ ನಿಗಧಿ; ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ರಾಷ್ಟ್ರೀಯ, ರಾಜ್ಯ ನೊಂದಾಯಿತ ಪಕ್ಷಗಳು ಮತ್ತು ಈ ಪಕ್ಷಗಳ ಅಭ್ಯರ್ಥಿಗಳು ರಾಜಕೀಯ ಜಾಹಿರಾತು ಪ್ರಸಾರ ಮಾಡುವ ಮೂರು ದಿನಗಳ ಮುಂಚಿತವಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಯಾವುದೇ ಇತರೆ ವ್ಯಕ್ತಿಗಳು, ನೊಂದಾಯಿತವಲ್ಲದ ಪಕ್ಷಗಳಾಗಿದ್ದಲ್ಲಿ ಜಾಹಿರಾತು ಪ್ರಸಾರ ಮಾಡಲು ಉದ್ದೇಶಿಸಿರುವ 7 ದಿನ ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಎರಡು ದಿನಗಳಲ್ಲಿ ಎಂ.ಸಿ.ಎಂ.ಸಿ ಸಮಿತಿ ಪರಿಶೀಲಿಸಿ ನಿರ್ಣಯಿಸಿ ಅರ್ಜಿ ಇತ್ಯರ್ಥ ಮಾಡಲಿದೆ.
ಮುದ್ರಣ ಮಾಧ್ಯಮಕ್ಕೆ ಪೂರ್ವ ಅನುಮತಿ ಭಾಗಶಃ ವಿನಾಯಿತಿ; ಚುನಾವಣಾ ಸಂದರ್ಭದಲ್ಲಿ ರಾಜಕೀಯ ಜಾಹಿರಾತುಗಳನ್ನು ಮುದ್ರಣ ಮಾಧ್ಯಮದಲ್ಲಿ ನೀಡಲು ಯಾವುದೇ ಪೂರ್ವ ಅನುಮತಿ ಅಗತ್ಯವಿರುವುದಿಲ್ಲ. ಆದರೆ ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಮತದಾನ ಮುಂಚಿನ ದಿನ ಹಾಗೂ ಮತದಾನ ದಿನ ಜಾಹಿರಾತು ಪ್ರಕಟಿಸಲು ಮುದ್ರಣ ಮಾಧ್ಯಮದಲ್ಲಿ ಮಾತ್ರ ಅನುಬಂಧ-ಸಿ ರಡಿ ಜಾಹಿರಾತು ಮುದ್ರಿಸುವ ಎರಡು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.