ದಾವಣಗೆರೆ: ಕುರುಬ ಸಮಾಜದಿಂದ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ. ಸಮಾಜದ ಏಳಿಗೆಗೆ ಇನ್ನಷ್ಟು ಉತ್ತಮ ಕೆಲಸವಾಗಬೇಕಿದೆ. ಸಮಾಜದ ಆಗು-ಹೋಗುವಿನಲ್ಲಿ ನಿಮ್ಮ ಜತೆ ನಾನಿದ್ದೇನೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾ ಕುರುಬ ಸಮಾಜ ಆಯೋಜಿಸಿದ್ದ ಸಮಾಜದ ಅಗಲಿದ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಮುಖಂಡರಾದ ಕೆ.ಮಲ್ಲಪ್ಪ, ಡಾ. ವೈ. ನಾಗಪ್ಪ, ಕೆಂಗೋ ಹನುಮಂತಪ್ಪ, ಸಿದ್ದಬಸಜ್ಜ, ಕರಿಬಸಪ್ಪ ಅವರು ಸಮಾಜ ಏಳಿಗೆಗೆ ಶ್ರಮಿಸಿದ್ದಾರೆ. ನಾನು ಕೂಡ ಕುರುಬ ಸಮಾಜ ಜೊತೆ ಇದ್ದು, ನಿಮ್ಮ ಆಗು-ಹೋಗುವಿನಲ್ಲಿ ಕೈ ಜೋಡಿಸುತ್ತೇನೆ ಎಂದರು.
ಡಾ, ವೈ ನಾಗಪ್ಪ ಅವರು ಸಮಾಜದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದರು. ಅವರಿಗೆ ಒಮ್ಮೆ (1998-99) ವಿಧಾನ ಸಭೆ ಟಿಕೆಟ್ ತಪ್ಪಿತ್ತು. ಕೊಂಡಜ್ಜಿ ಬಸಪ್ಪ ಅವರ ಮಗ ಮೋಹನ್ ಕೊಂಡಜ್ಜಿ ಅವರಿಗೆ ಎಸ್. ಎಂ. ಕೃಷ್ಣ ಅವರು ನೀಡಿದ್ದರು. ಇದಕ್ಕೆ ನಿಜಲಿಂಗಪ್ಪ ಅವರು ಲೆಟರ್ ಕೂಡ ಕೊಟ್ಟಿದ್ದರು. ಸೋನಿಯಾ ಗಾಂಧಿ ಅವರು ಅದಕ್ಕೆ ಅನುಮೋದನೆಯನ್ನೂ ಸಹ ನೀಡಿದ್ದರು. ಆಗ ನಾವು ಡಾ. ವೈ. ನಾಗಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಆಸ್ಕರ್ ಫರ್ನಾಂಡಿಸ್ ಮೂಲಕ ಮತ್ತೆ ಟಿಕೆಟ್ ತೆಗೆದುಕೊಂಡು ಬಂದೆವು. ಮೋಹನ್ ಕೊಂಡಜ್ಜಿ ಅವರು ಪಕ್ಷಕ್ಕೆ ಇದ್ದ ಶ್ರದ್ಧೆಯಿಂದ ಅವರು ಪಕ್ಷ ಬಿಟ್ಟು ಹೋಗಲಿಲ್ಲ. ನಂತರ ಅವರು ಎಸ್. ಎಂ ಕೃಷ್ಣ ಸರ್ಕಾರದಲ್ಲಿ ಮಾಧ್ಯಮ ಸಲಹೆಗಾರಾಗಿ ಕೆಲಸ ನಿರ್ವಹಿಸಿ, ಈಗ ಎಂಎಲ್ ಸಿ ಕೂಡ ಆಗಿದ್ದಾರೆ ಎಂದು ನೆನಪು ಮೆಲುಕು ಹಾಕಿದರು.
ಇನ್ನು ಕೆಂಗೋ ಹನುಮಂತಪ್ಪ ಅವರಿಗೆ ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲೇ ಬೇಕು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದೆ. ಸಿದ್ದರಾಮಯ್ಯ ಅವರು ನಮ್ಮ ಒತ್ತಡಕ್ಕೆ ಮಣಿದು ಕೆಂಗೋ ಹನುಮಂತಪ್ಪ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿದರು. ಹಾಗೆಯ ಸಿದ್ದಬಸಜ್ಜ ಅವರು ನಮ್ಮ ಅಣ್ಣ ಗಣೇಶ್ ಅವರ ಜತೆ 1986ರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಬೆಳಗ್ಗೆ ಎದ್ದ ತಕ್ಷಣ ಪೂಜೆ ಮಾಡಿಕೊಂಡು ನಮ್ಮ ಮನೆಗೆ ಬಂದು ಬಿಡುತ್ತಿದ್ದರು. ಮಿನಿಸ್ಟರ್ ಭೇಟಿ ಮಾಡೋಕೆ ಬೆಂಗಳೂರಿಗೆ ಹೋಗೋಣ ಅಜ್ಜ ಅಂದ್ರೆ ಸಾಕು, ನಮ್ಮ ಕರೆದುಕೊಂಡು ಹೋಗುತ್ತಿದ್ದರು ಎಂದು ಹಳೇಯ ನೆನಪು ಹಂಚಿಕೊಂಡರು.



