ದಾವಣಗೆರೆ: ಪ್ರಾರ್ಥನಾ ಮಂದಿರಗಳಲ್ಲಿ ಅನುಮತಿಗಿಂತ ಹೆಚ್ಚು ಡೆಸಿಬಲ್ ಹಾಗೂ ನಿಗದಿತ ಸಮಯ ಮೀರಿ ಧ್ವನಿವರ್ಧಕ ಬಳಸಿದವರ ಮೇಲೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಉಚ್ಚನ್ಯಾಯಾಲಯದ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಪೋಲೀಸ್ ಇಲಾಖೆ ನ್ಯಾಯಾಲಯದ ಆಜ್ಞೆಯನ್ನು ಕಟ್ಟುನಿಟ್ಟು ಜಾರಿಗೆ ಕಾರ್ಯನಿರ್ವಹಿಸಬೇಕೆಂದರು.
ಅನಧಿಕೃತ ಕಸಾಯಿ ಖಾನೆಗಳು ಹಾಗೂ ಅಕ್ರಮ ಗೋ ಸಾಗಾಣಿಕೆಯನ್ನು ಸರ್ಕಾರ ಸಹಿಸುವುದಿಲ್ಲ, ಎಲ್ಲೇ ಅಕ್ರಮ ಗೋ ಸಾಗಾಣಿಕೆ ಕಂಡುಬಂದರೆ ತಕ್ಷಣ ಸ್ಪಂದಿಸಿ ಗೋವುಗಳು ಕಟುಕರ ಪಾಲಾಗುವುದನ್ನು ತಪ್ಪಿಸಿ, ಅಕ್ರಮ ಗೋವು ಸಾಗಾಣಿಕೆದಾರರನ್ನ ಸಂಘಟನೆಗಳು ಹಿಡಿದು ಕೊಡುವುದಾದರೆ ನಿಮ್ಮ ಕೆಲಸವೇನು? ಸಬೂಬುಗಳನ್ನು ಹೇಳದೆ ಕೆಲಸ ಮಾಡಿ ತೋರಿಸಿ ಸರ್ಕಾರ ಈ ಕುರಿತು ಕಠಿಣ ಕಾನೂನುಗಳನ್ನು ಮಾಡಿದ್ದು, ಸರ್ಕಾರದ ಆಶಯ ಗೋವುಗಳು ಉಳಿಯಬೇಕು. ಸರ್ಕಾರದ ಆಶಯದಂತೆ ಕೆಲಸ ಮಾಡಿ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಯಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆಯೆಂಬ ದೂರುಗಳನ್ನು ಹಲವರು ನೀಡಿದ್ದು ಎಷ್ಟು ಕೇಸ್ ದಾಖಲಿಸಲಾಗಿದೆ? ಕಾಟಾಚಾರಕ್ಕೆ ಒಂದೆರಡು ಕೇಸ್ ದಾಖಲಿಸಿದರೆ ಸಾಲದು, ಸಂಪೂರ್ಣ ಅಕ್ರಮ ಮದ್ಯ ಮಾರಾಟ ನಿಲ್ಲಬೇಕು, ಯಾರೋ ಒಬ್ಬ ವ್ಯಕ್ತಿ ಅಕ್ರಮ ಮದ್ಯ ಮಾರಿ ಹತ್ತು ರೂಪಾಯಿ ತೆಗೆದುಕೊಂಡವನನ್ನು ಹಿಡಿಯುವುದಲ್ಲ, ಅವನಿಗೆ ಅಕ್ರಮ ಮದ್ಯ ಪೂರೈಸಿದ ಅಂಗಡಿಯವನನ್ನು ಹಿಡಿದು ಕೇಸ್ ಹಾಕಬೇಕು. ಇಲ್ಲದಿದ್ದರೆ ಕುಡಿದು ಕುಡಿದು ಬಡವರು, ದಲಿತರು ಕೂಲಿಕಾರರು ಸಾಯ್ತಾರೆ, ಹಾಗಾಗಿ ಬಡವರ ಜೀವಕ್ಕೂ ಬೆಲೆಯಿದೆ ಎಂಬ ಅರಿವು ಇರಲಿ ಒಟ್ಟಾರೆ ಪೊಲೀಸರಂದ್ರೆ ಜನರಿಗೆ ಗೌರವ ಮರ್ಯಾದೆ ಭಯ ಇರುವಂತೆ ಕಾರ್ಯನಿರ್ವಹಿಸಿ ಎಂದರು.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಬಗೆಗೆ ಗೌರವ ಇದ್ದು, ಅದನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ಪೊಲೀಸರು ಮಾಡಬೇಕು, ಜನಗಳು ನಿಮ್ಮನ್ನ ನಂಬಿ ರಾತ್ರಿ ನಿದ್ರೆ ಮಾಡುತ್ತಾರೆ, ಹಾಗಾಗಿ ಸಾರ್ವಜನಿಕರ ಹಿತರಕ್ಷಣೆ ನಿಮ್ಮ ಕರ್ತವ್ಯವೆಂದು ತಿಳಿದು ಕಾರ್ಯನಿರ್ವಹಿಸಿ. ಯಾರು ಅಸಹಾಯಕರು ಗೌರವಸ್ಥರು ಇರುತ್ತಾರೋ ಅವರ ಪರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕು, ಪೊಲೀಸರೆಂದರೆ ಸಾರ್ವಜನಿಕರ ಹಿತೈಶಿಗಳೆಂಬ ಭಾವನೆ ಬರಬೇಕು, ಕಾನೂನು ಸುವ್ಯವಸ್ಥೆಯ ಬಗೆಗೆ ಕಾಳಜಿವಹಿಸಬೇಕು, ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಬಲಪಡಿಸಿ, ಬೀಟ್ ಪೊಲೀಸರಿಗೆ ಅವರ ಏರಿಯಾದ ಎಲ್ಲಾ ಮಾಹಿತಿ ಇರಬೇಕು ಕೇವಲ ಬೀಟ್ ಇದೆ ಎಂದು ಆಪ್ರದೇಶಗಳಿಗೆ ಹೋಗಿ ಬರುವುದಲ್ಲ, ಅಲ್ಲಿ ನಡೆಯುವ ಪ್ರತಿ ಚಟುವಟಿಕೆ ನಿಮ್ಮ ಅರಿವಿಗಿರಬೇಕು ಹಾಗೂ ಏನಾದರು ವಿಷಯಗಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು.
ರಾಜ್ಯದ ನಗರಗಳ ಕೆಲ ಭಾಗಗಳಲ್ಲಿ ವೀದೇಶಿ ಸಂಪರ್ಕದ ವ್ಯಕ್ತಿಗಳು ಈ ದೇಶದ ಏಕತೆ ಹಾಳು ಮಾಡಲು ಸಂಚು ರೂಪಿಸುತ್ತಿರುವ ಘಟನೆಗಳು ಜರುಗುತ್ತಿವೆ, ಆದ್ದರಿಂದ ನಿಮ್ಮ ಠಾಣಾ ವ್ಯಾಪ್ತಿಯ ಸಮಗ್ರ ಚಿತ್ರಣ ನಿಮಗಿರಬೇಕು, ನಿಮ್ಮ ಏರಿಯಾಗೆ ಬಂದಿರುವ ಹೊಸ ವ್ಯಕ್ತಿಗಳು ಅವರ ಚಲನವಲನ, ಅವರ ಪೂರ್ವಾಪರಗಳ ಮಾಹಿತಿ ನಿಮ್ಮಲ್ಲಿದ್ದರೆ ಅಹಿತಕರ ಘಟನೆಗಳನ್ನು ತಪ್ಪಿಸಬಹುದು. ಕೆಲ ಏರಿಯಾಗಳಿಗೆ ಪೊಲೀಸರೇ ಹೋಗಲು ಹಿಂದು ಮುಂದು ನೋಡುತ್ತಾರೆ, ಸೂಕ್ಷ್ಮ ಪ್ರದೇಶಗಳೆಂಬ ಸಬೂಬು ಹೇಳುತ್ತಾರೆ. ಸೂಕ್ಷ್ಮ ಪ್ರದೇಶಗಳಿಗೆ ಹೋಗಬಾರದು ಅನ್ನುವುದಕ್ಕಿಂತ ನಾವಿದ್ದೇವೆ ಅಲ್ಲಿಗೆ ಹೋಗಿ ಎಂದು ಧೈರ್ಯ ತುಂಬಬೇಕು, ಪೊಲೀಸರೇ ಹೀಗಾದರೆ ದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವವರು ಯಾರು? ವಿಘಟನಕಾರಿ ಶಕ್ತಿಗಳ ಎಡೆಮುರಿ ಕಟ್ಟುವುದು ಪೊಲೀಸರ ಧ್ಯೇಯವಾಗಬೇಕೆಂದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಜೂಜು, ಮಟ್ಕಾ, ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದು ತಕ್ಷಣವೇ ಇಂತಹ ಚಟುವಟಿಕೆಗಳು ನಿಲ್ಲಬೇಕು, ಇಂತಹ ಚಟುವಟಿಕೆಗಳು ಮುಂದುವರಿದರೆ ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.ನಿಮ್ಮ ವರದಿಯಲ್ಲಿ 1602 ರೌಡಿ ಶೀಟರ್ಗಳು ಇದ್ದಾರೆಂದು ತೋರಿಸಿದ್ದೀರಿ ಒಂದು ಜಿಲ್ಲೆಯಲ್ಲಿ ಇಷ್ಟೊಂದು ರೌಢಿಗಳು ಇರಲು ಸಾಧ್ಯವೇ, ಯಾರದೇ ವಿರುದ್ದ ದುರುದ್ದೇಶಪೂರ್ವಕ ರೌಡಿ ಶೀಟರ್ ಹಾಕುವುದು ಬೇಡ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿ ಧ್ವನಿವರ್ಧಕ ಬಳಕೆ ಸಂಭಂಧ 331 ಅರ್ಜಿಗಳು ಬಂದಿದ್ದು 167 ಪರವಾನಗಿ ನೀಡಲಾಗಿದೆ, ಧ್ವನಿವರ್ಧಕಗಳ ಡೆಸಿಬಲ್ ಪರೀಕ್ಷಿಸಲು ಪ್ರತಿ ಠಾಣೆಯಲ್ಲಿ ಒಬ್ಬ ಸಿಬ್ಬಂದಿ ಇರುತ್ತಾರೆ, ಹಾಗೂ ನಿಗದಿತ ಅವಧಿಯೊಳಗೆ ಧ್ವನಿವರ್ಧಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಕೆಲವರು ಒಂದು ವರ್ಷ ಹಾಗೂ ಎರಡು ವರ್ಷಗಳಿಗೆ ಅನುಮತಿ ಪಡೆದಿದ್ದಾರೆ ಎಂದರು ಹಾಗೂ ಇಲಾಖೆಯ ಪ್ರಗತಿ ಮಾಹಿತಿ ನೀಡಿದರು. ಸಭೆಯಲ್ಲಿ ಐಜಿಪಿ ತ್ಯಾಗರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.