Connect with us

Dvgsuddi Kannada | online news portal | Kannada news online

66 ನೇ ಕನ್ನಡ ರಾಜ್ಯೋತ್ಸವ: ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ;ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ

ದಾವಣಗೆರೆ

66 ನೇ ಕನ್ನಡ ರಾಜ್ಯೋತ್ಸವ: ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ;ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ

ದಾವಣಗೆರೆ:  ನೂತನ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಂಡು, ಸೊಬಗನ್ನು ಹೆಚ್ಚಿಸುವ ಕೆಲಸ ಇನ್ನಷ್ಟು ಆಗಬೇಕಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 66 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.

ಪ್ರಸ್ತುತ ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಜ್ಞಾನ ಅವಶ್ಯಕವಾಗಿದ್ದರೂ, ಎಂದಿಗೂ ಮಾತೃ ಭಾಷೆ ಕನ್ನಡಕ್ಕೆ ನಮ್ಮದು ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಇದೆ. ಕರ್ನಾಟಕವೆಂದರೆ ಕೇವಲ ಗಡಿರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ, ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕøತಿಯನ್ನು ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತ ಭಾವವಾಗಿದೆ.

ಕನ್ನಡ ನಾಡು ನುಡಿ, ಸಂಸ್ಕøತಿ, ಪರಂಪರೆ ಇಲ್ಲಿನ ಆಚರಣೆ ಎಲ್ಲವೂ ವಿಶ್ವಮಾನ್ಯ ಗೌರವಗಳಿಗೆ ಪಾತ್ರವಾಗಿದೆ. ಕನ್ನಡ ರಾಜ್ಯೋತ್ಸವದದಂದು ಕರ್ನಾಟಕ ಏಕೀಕರಣದ ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳಲು ಮುಂದಾಗಬೇಕು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ, ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಚೆಲುವ ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎಂದರು.

ಕನ್ನಡ ಭಾಷೆಯ ಪ್ರಾಚೀನತೆಯನ್ನು ರಾಮಾಯಣ, ಮಹಾಭಾರತದಲ್ಲಿ ಗುರುತಿಸಬಹುದು. ಅಂದಿನಿಂದಲೂ ಕನ್ನಡ ನಾಡು-ನುಡಿಯ ಐಸಿರಿಗೆ ನಾಡ ಕವಿಗಳ ಕೊಡುಗೆ ಮಹೋನ್ನತವಾದದ್ದು. ಕನ್ನಡಭಾಷೆಯ ಹಾಗೂ ನಾಡಿನ ವೈಭವವನ್ನು ಅನೇಕ ಕವಿಗಳು ತಮ್ಮ ಪದಪುಂಜಗಳಲ್ಲಿ ಬಹು ಸುಂದರವಾಗಿ ವರ್ಣಿಸಿದ್ದಾರೆ. ಕೆಲವೊಮ್ಮೆ ಎಚ್ಚರಿಸಿದ್ದಾರೆ. ಕರುನಾಡ ಹಂದರಕ್ಕೆ ಕಾವ್ಯಗಳ ತೋರಣದ ಸೊಬಗಿದೆ. ದಾಸ ಪರಂಪರೆ, ಭಕ್ತಿ ಪರಂಪರೆ, ಸಾಹಿತ್ಯ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ, ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಮೂಲಕ ಕನ್ನಡ ನಾಡು ನುಡಿ ಸಂಸ್ಕøತಿ ಭಾಷೆಯ ಸಿರಿಯನ್ನು ಹೆಚ್ಚಿಸಿ, ಪಸರಿಸುವ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ ಎಂದರು.

ಇಡೀ ಜಗತ್ತನ್ನು ತತ್ತರಿಸುವಂತೆ ಮಾಡಿದ್ದ ಕೊರೊನಾ ಪ್ರಸ್ತುತ ಇಳಿಮುಖವಾಗಿರುವುದು ಸಂತಸದ ವಿಷಯವಾದರೂ ನಾವೆಲ್ಲರೂ ಎಚ್ಚರಿಕೆಯಿಂದ ಇರುವುದು ಅಷ್ಟೇ ಅನಿವಾರ್ಯವಾಗಿದೆ. ಇದೀಗ ಎಲ್ಲ ಶಾಲೆಗಳು ಆರಂಭವಾಗಿರುವುದು ಸಂತಸ ತಂದಿದೆ. ಮಕ್ಕಳಾದಿಯಾಗಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ ತಮ್ಮ ಅಧ್ಯಯನ, ಇತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡ ಭಾಷೆಯ ಕಂಪನ್ನು ಇನ್ನಷ್ಟು ಪರಿಸರಿಸುವಂತಾಗಬೇಕು ಎಂದರು.

ಆಕರ್ಷಕ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿರಲಿಲ್ಲ, ಹೀಗಾಗಿ ಸರ್ಕಾರದ ವತಿಯಿಂದ ಒಟ್ಟು 6 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡವು. ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ಪಿ.ಬಿ. ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪಿಎಸ್‍ಐ ಸಂಗಮೇಶ್ ನೇತೃತ್ವದ ತಂಡ, ನಗರ ಉಪವಿಭಾಗದ ಅರವಿಂದ್ ನೇತೃತ್ವದ ತಂಡ, ಸುನೀಲ್ ತೇಲಿ ನೇತೃತ್ವದ ಗ್ರಾಮಾಂತರ ನಾಗರಿಕ ಪೊಲೀಸ್ ತಂಡ, ಅಮರೇಶ್ ನೇತೃತ್ವದಲ್ಲಿ ಗೃಹರಕ್ಷಕ ದಳ, ಸುಹಾಸ್ ಮುಂದಾಳತ್ವದಲ್ಲಿ ಅಗ್ನಿಶಾಮಕ ದಳ, ಆಂಜನಪ್ಪ ನೇತೃತ್ವದಲ್ಲಿ ಅರಣ್ಯ ರಕ್ಷಕದಳ ಆಕರ್ಷಕ ಪಥಸಂಚಲನ ನಡೆಸಿದರು. ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು. ಪಥ ಸಂಚವಲನಕ್ಕೂ ಮುನ್ನ ತೆರೆದ ಜೀಪ್‍ನಲ್ಲಿ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವರು, ಗೌರವ ವಂದನೆ ಸ್ವೀಕರಿಸಿದರು.

ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಪೊಲೀಸ್ ಇಲಾಖೆಯ ಐಜಿಪಿ ರವಿ, ಎಸ್‍ಪಿ ಸಿ.ಬಿ. ರಿಷ್ಯಂತ್, ಎಎಸ್‍ಪಿ ಎಂ. ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಭಾಗವಹಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಘೋಷಿಸಿದಂತೆ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಲಾ ಏಳು ಉತ್ತಮ ಶಿಕ್ಷಕರನ್ನು ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ತಲಾ 10 ಸಾವಿರ ರೂ. ಗಳ ಬಹುಮಾನ ನೀಡಿ ಸನ್ಮಾನಿಸಿದರು. ಬಾರಿಯ ಸಮಾರಂಭದಲ್ಲಿ ಸರ್ಕಾರದ ಆದೇಶದಂತೆ ಸನ್ಮಾನಿತರಿಗೆ, ಗಣ್ಯರಿಗೆ ಹೂವು, ಹಾರ, ಸ್ಮರಣಿಕೆ ವಿತರಣೆಗೆ ನಿರ್ಬಂಧ ವಿಧಿಸಿ, ಪುಸ್ತಕಗಳನ್ನು ವಿತರಿಸಲಾಯಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯೋತ್ಸವ ಸಮಾರಂಭಕ್ಕೂ ಮುನ್ನ, ಬೆಳಿಗ್ಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅವರು, ಕನ್ನಡತಾಯಿ ಭುವನೇಶ್ವರಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಿಇಒ ವಿಜಯ ಮಹಾಂತೇಶ್, ಎಸ್‍ಪಿ ಸಿ.ಬಿ. ರಿಷ್ಯಂತ್, ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಹಲವು ಗಣ್ಯರು ಭುವನೇಶ್ವರಿಗೆ ಹೂಮಳೆ ಸುರಿದು, ನಮನ ಸಲ್ಲಿಸಿದರು. ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಮರೆವಣಿಗೆಯು ಮಹಾನಗರಪಾಲಿಕೆ ಮುಂಭಾಗದಿಂದ ಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿಬಂದಿತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top