ದಾವಣಗೆರೆ: ಜಲಸಿರಿ ಯೋಜನೆಯಡಿ ಕೈಗೊಂಡಿರುವ ವಲಯವಾರು ಕಾಮಗಾರಿಗಳನ್ನು ಪ್ರಸ್ತುತ ವರ್ಷದ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ, ಜನವರಿಯಲ್ಲಿ ನಿರಂತರ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ಲೋಕಸಭಾ ಸದಸ್ಯ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು.
ಗುರುವಾರ ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಜಲಸಿರಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಜಲಸಿರಿಯಡಿ ಮುಖ್ಯ ನೀರು ಸರಬರಾಜು ಹಾಗೂ ನಿರಂತರ ವಿತರಣಾ ನೀರು ಸರಬರಾಜು ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ನಿರಂತರ ವಿತರಣಾ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಮಳೆಯ ಸಕಾರಣ ಹೇಳಿ ಕಾಮಗಾರಿ ವಿಳಂಬ ಮಾಡಕೂಡದು. ಒಂದು ವೇಳೆ ಕಾಮಗಾರಿಯ ಅನುಷ್ಠಾನದಲ್ಲಿ ವಿಳಂಬವಾದರೆ ಗುತ್ತಿಗೆದಾರರು ಅಥವಾ ಅಧಿಕಾರಿಗಳನ್ನು ತಲೆದಂಡರನ್ನಾಗಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿತರಣಾ ಮಾರ್ಗದ ಪೈಪ್‍ಲೈನ್ ಕಾಮಗಾರಿಯೂ ಇನ್ನು 275 ಕಿ.ಮೀ ಬಾಕಿ ಇದ್ದು, ಪ್ರತಿ ತಿಂಗಳು 25 ಕಿ.ಮೀ ಕಾಮಗಾರಿ ಕೈಗೊಂಡರೂ ಉಳಿದ 5 ತಿಂಗಳಲ್ಲಿ ನಿರ್ದಿಷ್ಟ ಗುರಿ ತಲುಪುವುದು ಅಸಾಧ್ಯ, ಹಾಗಾಗೀ ಇನ್ನು ಹೆಚ್ಚಿನ ಶ್ರಮ ಮತ್ತು ಸಮಯ ವ್ಯಹಿಸಿ ಕೆಲಸ ಮಾಡಬೇಕು. ಬೃಹತ್ ನೀರು ಪೂರೈಕೆ ಯೋಜನೆಯ ಪೈಪ್‍ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ಲೋಕೊಪಯೋಗಿ ಇಲಾಖೆಗಳಿಂದ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಲಾಗುವುದು. ಈಗಾಗಲೇ ನಿಗಧಿಪಡಿಸಿದ ಕಾಮಗಾರಿಯ ಗುರಿಯನ್ನು ಮುಂದಿನ ಸಭೆಯೊಳಗಾಗಿ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಯೋಜನೆ ಟಾಸ್ಕ್ ಮ್ಯಾನೇಜರ್ ದೇವರಾಜ ಮಾತನಾಡಿ ರೂ. 532 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆಯಡಿ 24*7 ನಿರಂತರ ನೀರು ಸರಬರಾಜು ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಯಡಿ 1336 ಕಿ.ಮೀ ಪೈಪ್‍ಲೈನ್ ವಿತರಣಾ ಮಾರ್ಗ ಹಾಕಬೇಕಾಗಿದೆ, ಅದರಲ್ಲಿ 1080 ಕಿಮೀ ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, 275 ಕಿ.ಮೀ ಪೈಪ್ ಲೈನ್ ಕಾಮಗಾರಿ ಬಾಕಿ ಇದೆ. 19 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ 13 ಟ್ಯಾಂಕ್‍ಗಳು ಪೂರ್ಣಗೊಂಡಿದ್ದು, ಉಳಿದ 05 ಟ್ಯಾಂಕ್‍ಗಳ ಕೆಲಸ ಪ್ರಗತಿಯಲ್ಲಿದೆ. ದಾವಣಗೆರೆ ನಗರದಲ್ಲಿನ 97,589 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕಾಗಿದ್ದು, ಅದರಲ್ಲಿಉ ಈಗಾಗಲೇ 50,283 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಬಾಕಿ ಉಳಿದ ಎಲ್ಲಾ ಮನೆಗಳಿಗೂ ಸಂಪರ್ಕ ಕಲ್ಪಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ತಹಶೀಲ್ದಾರ್ ಬಸವನಗೌಡ ಕೊಟ್ಟುರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.