ದಾವಣಗೆರೆ: ಪ್ರತಿ ವರ್ಷ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಈ ವರ್ಷ ನಿರೀಕ್ಷೆ ಮೀರಿ ಮಳೆ ಬಿದ್ದಿದೆ. ಜೋರು ಮಳೆ ಅಬ್ಬರಕ್ಕೆ ದಸರಾ ಹಬ್ಬ ದಿನವಾದ ಶನಿವಾರ ಸುಮಾರು 50 ವರ್ಷಗಳ ನಂತರ ಜಗಳೂರು ಕೆರೆ ಕೋಡಿ ಬಿದ್ದು, ಉಕ್ಕಿ ಹರಿಯುತ್ತಿದೆ. ಮೈದುಂಬಿ ಹರಿಯುವ ಕೆರೆಯ ಸೊಬಗು ಕಣ್ತುಂಬಿಕೊಳ್ಳಲು ಜಗಳೂರು ಸೇರಿ ಸುತ್ತಮುತ್ತಲಿನ ಗ್ರಾಮ ಜನರು ತಂಡೋಪತಂಡವಾಗಿ ಕೆರೆಯತ್ತ ಧಾವಿಸಿ ಸಂಭ್ರಮಿಸಿದರು.
ಜಗಳೂರು ವಿಧಾನಸಭಾ ವ್ಯಾಪ್ತಿಯ ಜಗಳೂರು ಕೆರೆ ಸೇರಿದಂತೆ 57 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ತುಂಬಿಸಲು ಶ್ರಮಿಸಿದ ಸಿರಿಗೆರೆ ತರಳಬಾಳುಶ್ರೀಗಳಿಗೆ ಇಡೀ ತಾಲ್ಲೂಕಿನ ಜನ ಈ ಜೈಕಾರ ಕೂಗಿ ಸ್ಮರಿಸಿದರು. ತರಳಬಾಳು ಶ್ರಿಗಳಿಗೆ ಜಯವಾಗಲಿ, ಆಧುನಿಕ ಭಗೀರಥ ತರಳಬಾಳು ಶ್ರೀ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಕೆರೆ ತುಂಬಿದ ಖುಷಿಯಲ್ಲಿ ಜನ ಕುಣಿದಾಡಿದರು. ಮಕ್ಕಳಂತೂ ನೀರಿನಲ್ಲಿ ಈಜಿ ಸಂಭ್ರಮಿಸಿದರು. ಮಹಿಳೆಯರು ತುಂಬಿದ ಕೆರೆಯ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಜಗಳೂರು ಕೆರೆ ಕೋಡಿ ಬೀಳುತ್ತಿದ್ದಂತೆ ಬೆಳಗ್ಗೆಯೇ ಹಾಲಿ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್ ಪಿ.ರಾಜೇಶ್, ಕೆ.ಪಿ. ಪಾಲಯ್ಯ, ಎನ್.ಎಸ್.ರಾಜಣ್ಣ, ಬಿ.ಮಹೇಶ್ವರಪ್ಪ, ಆರ್.ಓಬಳೇಶ್, ನೀರಾವರಿ ಹೋರಾಟ ಸಮಿತಿ ಮುಖಂಡರು, ರೈತರು ಸೇರಿದಂತೆ ಅನೇಕ ಮುಖಂಡರು ವೀಕ್ಷಿಸಿ, ಸಂತಸಪಟ್ಟರು.
ಜಗಳೂರು ಕೆರೆ ಕೋಡಿಬಿದ್ದ ಪರಿಣಾಮ ಜಗಳೂರುನಿಂದ ಕಣ್ವಕುಪ್ಪೆ ಮಾರ್ಗವಾಗಿ ಪಲ್ಲಾಗಟ್ಟೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿಹೋಗಿತ್ತು. ಇದರಿಂದಾಗಿ ವಾಹನಗಳು ಸೇರಿದಂತೆ ಸಾರ್ವಜನಿಕರಿಗೆ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಮಳೆ ಹಾಗೂ ಕೆರೆಗಳ ನೀರು ಹರಿದು ಜಗಳೂರು ಕೆರೆ ಕೋಡಿ ಬಿದ್ದ ಪರಿಣಾಮ ಪಟ್ಟಣ ಕೆರೆ ಅಂಚಿನ ಬೈಪಾಸ್ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡ ಸುಮಾರು 50ಕ್ಕೂ ಅಧಿಕ ಮನೆಗಳು, ಬಿಸಿಎಂ ಹಾಸ್ಟೆಲ್, ಟೆಲಿಪೋನ್ ಆಫೀಸ್ ಸಂಪೂರ್ಣ ಜಲಾವೃತವಾಗಿವೆ. ಇಲ್ಲಿ ವಾಸಿಸುವ ಜನರ ಗೋಳು ಏಳುತೀರದಾಗಿದೆ. ಜನರ ಬದುಕು ಬೀದಿಗೆ ಬಿದ್ದಂತಾಗಿದೆ.
ಶ್ರೀಗಳಿಂದ ಇಂದು ಬಾಗಿನ: ಜಗಳೂರು ಕೆರೆ ಸೇರಿದಂತೆ ತಾಲೂಕಿನ ಗಡಿಮಾಕುಂಟೆಕೆರೆ, ಹೊಸಕೆರೆ, ಹಿರೆಮಲ್ಲನಹೊಳೆ ಸೇರಿದಂತೆ ಬಹುತೇಕ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ನಾವು ಸಣ್ಣವರಿದ್ದಾಗ ಜಗಳೂರು ಕೆರೆಯಲ್ಲಿ ಈಜಾಡುತ್ತಿದ್ದೆವು. ಸಿರಿಗೆರೆ ಶ್ರೀಗಳ ಶ್ರಮ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಹಾಲಿ ಸಿಎಂ ಸಿದ್ದರಾಮಯ್ಯ, ಸಚಿವರು, ಸಂಸದರು, ಶಾಸಕರ ಅಭಿವೃದ್ಧಿ ಸ್ಪಂದನೆ ಪ್ರತಿಫಲದಿಂದ ಜಗಳೂರು ಕೆರೆ ಕೋಡಿ ಬಿದ್ದಿದೆ. ಈಗ ಕೆರೆಗೆ ಬಾಗಿನ ಅರ್ಪಿಸಲು ಸಿರಿಗೆರೆ ಶ್ರೀಗಳು ಅಕ್ಟೋಬರ್ 13ರಂದು ಬರಲಿದ್ದಾರೆ. ನಾನು ಇಂದು ಸಿರಿಗೆರೆಗೆ ಭೇಟಿ ನೀಡಿ, ಮತ್ತೊಮ್ಮೆ ಶ್ರೀಗಳನ್ನು ಆಹ್ವಾನಿಸಲಿದ್ದೇನೆ. ಕಾರ್ಯಕ್ರಮಕ್ಕೆ ರೈತರು ಸೇರಿದಂತೆ ಸಾರ್ವಜನಿಕರು ಆಗಮಿಸುವಂತೆ ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ತುಂಗಭದ್ರಾ ನದಿಯಿಂದ ಕ್ಷೇತ್ರದ 57 ಕೆರೆಗಳಿಗೆ ನೀರು ಬರಲು ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಸರ್ಕಾರಗಳ ಪ್ರತಿಫಲ, ಸಂಸದ ಜಿ.ಎಂ. ಸಿದ್ದೇಶ್ವರ್, ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್, ಆಂಜನೇಯ, ಹಾಲಿ ಶಾಸಕ ದೇವೇಂದ್ರಪ್ಪ ಶ್ರಮ ಕಾರಣವಾಗಿದೆ. ಜೊತೆಗೆ ಮಳೆಯೂ ಬಂದಿರುವ ಪರಿಣಾಮ ಜಗಳೂರು ಕೆರೆ ಸೇರಿದಂತೆ ವಿವಿಧ ಕೆರೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಮಾಜಿ ಶಾಸಕ ಎ ಸ್ ವಿ.ರಾಮಚಂದ್ರ ಅಭಿಪ್ರಾಯಪಟ್ಟರು.
1972-1973ನೇ ಸಾಲಿನಲ್ಲಿ ಜಗಳೂರು ಕೆರೆ ಕೋಡಿ ಬಿದ್ದಿತ್ತು. ಅನಂತರ ದಸರಾ ದಿನವಾದ ಶನಿವಾರ ಜಗಳೂರು ಕೆರೆ ಸೇರಿದಂತೆ ತಾಲೂಕಿನ ಅನೇಕ ಕೆರೆಗಳು ಕೋಡಿಬಿದ್ದಿವೆ. ಸಿರಿಗೆರೆ ಶ್ರೀಗಳು, ಅಂದಿನ-ಇಂದಿನ ಅವಧಿಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಶ್ರಮದಿಂದ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಯುವಂತಾಗಿದೆ. ಇದಕ್ಕಾಗಿ ಜನರ ಪರವಾಗಿ ಸರ್ಕಾರ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇಬೆ ಎಂದು ಮಾಜಿ ಶಾಸಕ ಚ್.ಪಿ.ರಾಜೇಶ್ ಹೇಳಿದರು.