ಹರಿಹರ: ಧರ್ಮದಲ್ಲಿ ರಾಜಕೀಯ ಪ್ರವೇಶಿಸಬಾರದು. ರಾಜಕೀಯ ಒಂದು ಆಟ. ರಾಜಕೀಯವನ್ನು ಧರ್ಮದಲ್ಲಿ ಎಳೆದು ತರಬಾರದು ಎಂದು ಸಿರಿಗೆರೆಯ ತರಳಬಾಳು ಬೃಹ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹರಿಹರ ತಾಲ್ಲೂಕಿನ ಸಾಧು ವೀರಶೈವ ಲಿಂಗಾಯತ ಸಮಾಜದಿಂದ ಕೊಂಡಜ್ಜಿ ಗ್ರಾಮದಲ್ಲಿ ಆಯೋಜಿಸಿದ್ದ ತರಳಬಾಳು ಬೃಹ್ಮಠದ 20 ನೇ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮ ಕಾರ್ಯದಲ್ಲಿ ಪಕ್ಷಭೇದ ಮರೆತು ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ಯಾರು ಕೂಡ ದ್ವೇಷದಿಂದ ಬದುಕಲು ಸಾಧ್ಯವಿಲ್ಲ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು. ರಾಜಕೀಯಲ್ಲಿ ಧರ್ಮ ದುರ್ಬಳಕೆ ಆಗಬಾರದು. ಎಲ್ಲರು ದೇಶಭಿಮಾನ, ರಾಷ್ಟ್ರೀಯ ಭಾವನೆ ಬೆಳೆಸಿಕೊಂಡು ದೇಶ ಕಟ್ಟಬೇಕಿದೆ ಎಂದರು.
ಮನುಷ್ಯ ಈಗ ವ್ಯವಹಾರಿಕ ಸಂಬಂಧವಾಗಿ ಮಾರ್ಪಟ್ಟಿದೆ. ಈ ಹಿಂದೆ ಕೊಡುಕೊಳ್ಳುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ, ಈಗ ಕೊಟ್ಟ ವಸ್ತುವನ್ನು ಅಳೆದು ನೋಡುವ ಕಾಲ ಬಂದಿದೆ. ಏನೇ ಕೊಡುವುದಾದರೂ ಹೆಸರು ಬರಬೇಕು ಎನ್ನುವ ಜನ ಇದ್ದಾರೆ. ತ್ಯಾಗದಿಂದ ಕೆಲಸ ಮಾಡುವವರು ಇಲ್ಲವಾಗಿದೆ. ಮನುಷ್ಯ ಸಂಬಂಧದಲ್ಲಿ ಪ್ರೀತಿ ಮಾಯವಾಗಿದ್ದು, ವ್ಯಾವಹಾರಿಕವಾಗಿವೆ ಎಂದರು.
ಸಾವು ಯಾರನ್ನಬೇಕಾದರೂ ತೆಗೆದುಕೊಂಡು ಹೋಗಬಹುದು. ಆದರೆ, ಪ್ರೀತಿಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇನ್ನೊಬ್ಬರ ರಕ್ತ ಹೀರಿ ಬದುಕುವುದಕ್ಕಿಂತ ಇನ್ನೊಬ್ಬರಿಗೆ ರಕ್ತ ಕೊಟ್ಟು ಬದುಕಬೇಕಿದೆ. ರಕ್ತದಾನದಲ್ಲಿ ಧರ್ಮ, ಜಾತಿ ಬೇಧವಿರಲ್ಲ. ರಕ್ತಕ್ಕೆ ಗಂಡು- ಹೆಣ್ಣು, ಜಾತಿ ಎಂಬ ವ್ಯತ್ಯಾಸವಿಲ್ಲ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದೇ ತ್ಯಾಗ. ಪ್ರೀತಿ, ಅನುರಾಗ ಇಲ್ಲದ ಜೀವನ ಜೀವಲ್ಲ. ಗಂಡ-ಹೆಂಡತಿ ಪ್ರೀತಿಗಿಂತ ತಾಯಿ ಪ್ರೀತಿ ದೊಡ್ಡದು ಎಂದು ತಿಳಿಸಿದರು.
ಈ ಕಾರ್ಯಕ್ರಮ ಕೇವಲ ಭಾಷಣ ಕಾರ್ಯಕ್ರಮವಾಗದೇ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ತರಳಬಾಳು ಮಠದ ಬಗ್ಗೆ ಭಕ್ತರಲ್ಲಿ ಅಪಾರ ಭಕ್ತಿ, ನಂಬಿಕೆ. ಈ ಕಾರ್ಯಕ್ರಮ ಕೊಂಡಜ್ಜಿ ಭಕ್ತರು ತುಂಬಾ ಸರಳವಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.ಆದರೆ, ಈ ಗುರ ಭಕ್ತಿಯಲ್ಲಿ ರಾಜಕೀಯ ಬರಬಾರದು. ಒಬ್ಬರ ಆಲೋಚನೆಯಂತೆ ಇನ್ನೊಬ್ಬರ ಆಲೋಚನೆ ಇರುವುದಿಲ್ಲ. ನಾನು ಎನ್ನುವ ಅಹಂಕಾರ ಹೋಗಿ, ಸಮಾಜ ಸೇವೆ ಮನೋಭಾವ ಬರಬೇಕು. ತ್ಯಾಗ ಮನೋಭಾವ ಬರಬೇಕು. ಆಗ ಮಾತ್ರ ಸುಖ ಸಂತೋಷದಿಂದ ಬದುಕಲು ಸಾಧ್ಯ ಎಂದು ಕರೆ ನೀಡಿದರು.
ಕೊಂಡಜ್ಜಿಯಲ್ಲಿನ ಕಾರ್ಯಕ್ರಮ ಪೂರ್ಣಕೊಳ್ಳಬೇಕಾದ್ರೆ, ಕೇಂದ್ರ ಮಾಜಿ ಸಚಿವ ಕೊಂಡಜ್ಜಿ ಬಸಪ್ಪ ಅವರ ಹೆಸರು ನೆನೆಯಲೇ ಬೇಕು. ಈಗಿರುವ ಬೆಂಗಳೂರು ತರಳಬಾಳು ಕೇಂದ್ರಕ್ಕೆ ನಿವೇಶನ ಮಂಜೂರು ಮಾಡಲು ಕೊಂಡಜ್ಜಿ ಬಸಪ್ಪ ಅವರ ಕೊಡುಗೆ ಸ್ಮರಿಸಲೇಬೇಕಿದೆ. ಕೊಂಡಜ್ಜಿ ಬಸಪ್ಪ ಅವರು ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರ ಜತೆ ಮಾತನಾಡಿ, ನಮಗೆ ಗೊತ್ತಿಲ್ಲದಂತೆಯೇ ನಿವೇಶನ ಮಂಜೂರು ಮಾಡಿಸಿದ್ದರು. ನಮಗೆ ಬೆಂಗಳೂರಲ್ಲಿ ನಿವೇಶನ ಮುಂಜೂರು ಆಗಿದ್ದನ್ನು ಕೇಳಿ ಆಶ್ಚರ್ಯ ಆಯ್ತು. ಆ ನಂತರ ನಾವು ಅರ್ಜಿ ಸಲ್ಲಿಸಿದ್ದೇವು. ಬಸಪ್ಪ ಅವರು ಕಾರಿನಲ್ಲಿ ನಮ್ಮ ಜೊತೆ ಬಂದು ಬೆಂಗಳೂರಿನ ಆರ್ ಟಿ ನಗರದಲ್ಲಿ ನಿವೇಶನ ತೋರಿಸಿ, ಮಂಜೂರು ಮಾಡಿಸಿಕೊಟ್ಟರು. ಅವರು ಮಾಡಿ ಸಹಾಯವನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ. ಇದೆಲ್ಲ, ಭಕ್ತರ ಭಕ್ತ, ಶ್ರದ್ಧೆ ಎಂದು ನೆನೆದರು.
ನಮ್ಮ ರೈತರು ಅಡಿಕೆ ಮೇಲಿನ ಪ್ರೀತಿಯಿಂದ ಅಡಿಕೆ ಹೆಚ್ಚು ಬೆಳೆಯುತ್ತಿಲ್ಲ. ಅಡಿಕೆ ಬೆಲೆ ಮೇಲಿನ ಪ್ರೀತಿಯಿಂದ ಹೆಚ್ಚು ಬೆಳೆಯುತ್ತಿದ್ದಾರೆ. ಹೀಗಾಗಿ ಒಂದೇ ಬೆಳೆ ಮೇಲೆ ಹೆಚ್ಚು ಅವಲಂಬನೆ ಆಗದೇ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಮುಂದೆ ಒಂದು ದಿನ ರೈತರಿಗೆ ಬೇಡಿಕೆ ಬರುವ ಕಾಲ ದೂರ ಇಲ್ಲ. ಈಗ ರೈತರೇ ಈಗ ಸುಖ ಪುರುಷರು ಎಂದರು.
ತರಳಬಾಳು ಕೆವಿಕೆ ತಜ್ಞ ಬಸವನಗೌಡ ಮಾತನಾಡಿ, ಕೃಷಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಈಗ ಶೇ. 45 ರಷ್ಟು ಭೂಮಿ ಕೃಷಿಗೆ ಪೂರಕವಾಗಿಲ್ಲ. ಹರಿಹರ ತಾಲ್ಲೂಕಿನಲ್ಲಿ ಭತ್ತ ಬಿಟ್ಟರೆ ಬೇರೆ ಬೆಳೆ ಬೆಳೆಯದೇ ಇರುವ ಸ್ಥಿತಿ ಇದೆ. 2024 ರಲ್ಲಿ ಬರಗಾಲ ಬರಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ನೀರಿನ ಸದ್ಬಳಿಕೆ ಮಾಡಿ ಕೊಳ್ಳಬೇಕಿದೆ. ಎಲ್ಲರೂ ವಾಣಿಜ್ಯ ಬೆಳೆಯತ್ತ ಮುಖಮಾಡಿದ್ದಾರೆ. ಅರಲ್ಲೂ ಅಡಿಕೆ ಬೆಳೆ ಎರಡು ವರ್ಷದಲ್ಲಿ ಡಬಲ್ ಆಗಿದೆ. ಎಲ್ಲಿ ಭೂಮಿಗೆ ನೀರು ಹೆಚ್ಚಾಗಿ ಬಳಸುತ್ತೇವೋ ಆ ಭೂಮಿ ಹಾಳಾಗಿದೆ ಎಂಧಾರ್ಥ. ರೈತರ ಆದಾಯ ದ್ವಿಗುಣ ಆಗಬೇಕಾದಲ್ಲಿ, ನವ ಯಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಬದಲಾದ ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು. ಜತೆಗೆ ಮಣ್ಣಿನ ಫಲವತ್ತತೆ ಕಾಪಡಿಕೊಳ್ಳಬೇಕಿದೆ. ಯುವಕರು ಕೃಷಿ ಕಡೆ ಮುಖ ಮಾಡಬೇಕಿದೆ ಎಂದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ. ಎನ್. ದೇವರಾಜ ಮಾತನಾಡಿ, ನಾವು ತರಳಬಾಳು ಮಹಾ ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕಿದೆ. ಶ್ರೀಗಳು ಜಲ ಕ್ರಾಂತಿ, 1980ರಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಜಿಲ್ಲೆಯಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಿದ್ದಾರೆ. ರೈತರು ಸಣ್ಣಪುಟ್ಟ ಸಮಸ್ಯೆ ಮೀರಿ ಬೆಳೆಯಬೇಕಿದೆ. ಈಗಿನ ಕೃಷಿ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟದಲ್ಲಿದೆ. ಸಮಗ್ರ ಕೃಷಿ ಮೂಲಕ ಸಂಕಷ್ಟ ದೂರ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಶಾಸಕ ಎಸ್. ರಾಮಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಕಾಂಗ್ರೆಸ್ ಯುವ ಮುಖಂಡ ನಿಖಿಲ್ ಕೊಂಡಜ್ಜಿ, ಸಾಧು ವೀರಶೈವ ಮಹಾ ಸಭಾ ಹರಿಹರ ತಾಲ್ಲೂಕು ಅಧ್ಯಕ್ಷ ಮಹದೇವಪ್ಪ ಗೌಡ್ರು , ಮಾಗನೂರು ಬಸಪ್ಪ ಶಾಲೆ ಕಾರ್ಯದರ್ಶಿ ಸಂಗಮೇಶ್ ಗೌಡ್ರು ಇದ್ದರು.