ದಾವಣಗೆರೆ: ಸರ್ಕಾರ ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ದಾವಣಗೆರೆ ನಗರದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ 29 ಕೋಟಿ ಅನುದಾನ ನೀಡುವ ಮೂಲಕ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದು ಇದನ್ನು ವಿದ್ಯಾರ್ಥಿಗಳು ತಮ್ಮ ಮನೆಯಂತೆ ಸ್ವಚ್ಚವಾಗಿಟ್ಟುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕೆಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ನಗರದ ಆರ್.ಟಿ.ಓ ಆಫೀಸ್ ಹತ್ತಿರದ ಎಸ್.ಪಿ.ಎಸ್ ನಗರದಲ್ಲಿ ನಿರ್ಮಿಸಿರುವ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ನಾಲ್ಕು ವಿದ್ಯಾರ್ಥಿನಿಲಯಗಳ ಕಟ್ಟಡ ಉದ್ಗಾಟಿಸಿ ಮಾತನಾಡಿದರು. ಬಡ ಮಕ್ಕಳಿಗಾಗಿ ಶಾಲಾ, ಕಾಲೇಜು ಹಾಗೂ ವಾಸ್ತವ್ಯಕ್ಕೆ ಹಾಸ್ಟೆಲ್‍ಗಳನ್ನು ನಿರ್ಮಾಣ ಮಾಡುತ್ತಿದೆ. ಇದರಿಂದ ಅನೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಾಲ್ಕು ಕಟ್ಟಡಗಳಿಂದ ಒಟ್ಟು 900 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಾಗಲಿದ್ದು ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದ್ದು ಅತ್ಯುನ್ನತವಾದ ವ್ಯಾಸಂಗಕ್ಕೆ ಮುಂದಾಗಬೇಕೆಂದರು.
ಸಂಸದ ಡಾ.ಜಿ.ಎಂ ಸಿದ್ದೇಶ್ವರ, ಜಗಳೂರು ಶಾಸಕ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ, ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್, ಪಾಲಿಕೆ ಸದಸ್ಯೆ ಸುಧಾ ಇಟ್ಟಿಗುಡಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೌಸರ್ ರೇಷ್ಮಾ.ಜಿ ಸ್ವಾಗತಿಸಿದರು.



