Connect with us

Dvgsuddi Kannada | online news portal | Kannada news online

ದಾವಣಗೆರೆ: ಸಾಫ್ಟ್‍ವೇರ್ ಟೆಕ್ನಾಲಜಿಸ್ ಪಾರ್ಕ್ ಉಪಕೇಂದ್ರ ಏಪ್ರಿಲ್ ನಲ್ಲಿ ಉದ್ಘಾಟನೆ; ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ

ದಾವಣಗೆರೆ: ಸಾಫ್ಟ್‍ವೇರ್ ಟೆಕ್ನಾಲಜಿಸ್ ಪಾರ್ಕ್ ಉಪಕೇಂದ್ರ ಏಪ್ರಿಲ್ ನಲ್ಲಿ ಉದ್ಘಾಟನೆ; ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ನಗರದಲ್ಲಿ ಸಾಫ್ಟ್‍ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾದ (ಎಸ್‍ಟಿಪಿಐ) ಉಪಕೇಂದ್ರ ಪ್ರಾರಂಭಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ಏಪ್ರಿಲ್ ಮೊದಲ ವಾರದೊಳಗೆ ಉಪಕೇಂದ್ರವು ಉದ್ಘಾಟನೆಗೆ ಲಭ್ಯವಾಗುವಂತೆ ಮಾಡಲು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಸೂಚನೆ ನೀಡಿದರು.

ಕೋವಿಡ್ ಪಾಸಿಟಿವ್ ಆದ ಕಾರಣ ಜಿಎಂಐಟಿ ಅತಿಥಿ ಗೃಹದಲ್ಲಿ ಐಸೋಲೇಷನ್‍ನಲ್ಲಿರುವ ಸಂಸದರು, ದಾವಣಗೆರೆ ಜೆ.ಹೆಚ್.ಪಟೇಲ್ ನಗರದಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಸಿದ್ಧವಾಗುತ್ತಿರುವ ಎಸ್‍ಟಿಪಿಐ ಉಪಕೇಂದ್ರದ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಎಸ್‍ಟಿಪಿಐ ಉಪಕೇಂದ್ರ ಪ್ರಾರಂಭವಾಗಬೇಕೆಂಬುದು ಜಿಲ್ಲೆಯ ಜನರ ಬಹುದಿನಗಳ ಕನಸು. ಇದೀಗ ನನಸಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ತಾತ್ಕಾಲಿಕವಾಗಿ ಎಸ್‍ಟಿಪಿಐ ಉಪಕೇಂದ್ರದ ಪ್ರಾರಂಭಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಸಂಸತ್ ಅಧಿವೇಶನ ಮುಗಿದ ಕೂಡಲೆ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟನೆಗೆ ಎಸ್‍ಟಿಪಿಐ ಉಪಕೇಂದ್ರ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಎಸ್‍ಟಿಪಿಐ ಕೇಂದ್ರ ಪ್ರಾರಂಭವಾದಲ್ಲಿ, ಹಲವು ಸಾಫ್ಟ್‍ವೇರ್ ಕಂಪನಿಗಳು, ಆ್ಯಪ್ ಮೂಲಕ ಕಾರ್ಯ ನಿರ್ವಹಿಸುವ ಕಂಪನಿಗಳು ಜಿಲ್ಲೆಯತ್ತ ಮುಖಮಾಡಲಿವೆ. ಹೀಗಾಗಿ ಜಿಲ್ಲೆಯಲ್ಲಿ ಐಟಿ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ ಎಂದು ಸಂಸದರು ಹೇಳಿದರು.

ಸಾಫ್ಟ್‍ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾದ ಬೆಂಗಳೂರಿನ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ಅವರು ಎಸ್‍ಟಿಪಿಐ ಉಪಕೇಂದ್ರದ ಕುರಿತು ಮಾಹಿತಿ ನೀಡಿ, ದಾವಣಗೆರೆಯಲ್ಲಿ ಉಪಕೇಂದ್ರ ಪ್ರಾರಂಭಿಸಲು ಎಸ್‍ಟಿಪಿಐ 2.62 ಕೋಟಿ ರೂ. ಅನುದಾನ ವಿನಿಯೋಗಿಸುತ್ತಿದೆ. ರಾಜ್ಯದಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಯಲ್ಲಿ ಎಸ್‍ಟಿಪಿಐ ಉಪಕೇಂದ್ರಗಳಿದ್ದು, ದಾವಣಗೆರೆಯಲ್ಲಿ 04ನೇ ಉಪಕೇಂದ್ರ ಪ್ರಾರಂಭವಾಗಲಿದೆ. ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆ ಜಿಲ್ಲೆ ಸ್ವಚ್ಛ, ಸುಂದರ ನಗರವಾಗಿದ್ದು, ವಿವಿಧ ಐಟಿ ಕಂಪನಿಗಳಿಗೆ, ದಾವಣಗೆರೆಯಲ್ಲಿ ಸಾರ್ಟ್‍ಅಪ್ ಕಂಪನಿಗಳು, ಆ್ಯಪ್ ಕಂಪನಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಉಪಕೇಂದ್ರದಲ್ಲಿ 200 ಸಿಟಿಂಗ್ ಸಾಮಥ್ರ್ಯದ ಪ್ಲಗ್ ಅಂಡ್ ಪ್ಲೇ ಸೌಲಭ್ಯ ಒದಗಿಸಲಾಗುವುದು, ಅಲ್ಲದೆ ಹೈಸ್ಪೀಡ್ ಡಾಟಾ ಟ್ರಾನ್ಸ್‍ಪರ್, ಸಾರ್ಟ್‍ಅಪ್ ಇನ್‍ಕ್ಯೂಬೇಷನ್ ಸೆಂಟರ್ ವ್ಯವಸ್ಥೆ ದೊರಕಿಸಲಾಗುವುದು. ಇದು ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶ ಲಭ್ಯವಾಗಲು ನೆರವಾಗಲಿದೆ. ಒಟ್ಟಾರೆ ರಾಜ್ಯದ ಮಧ್ಯಭಾಗವೂ ಕೂಡ ಇನ್‍ಫೋಸಿಸ್, ವಿಪ್ರೋ, ಟಿಸಿಎಸ್ ಸೇರಿದಂತೆ ಹಲವು ಐಟಿ ಉದ್ಯಮಗಳು ಜಿಲ್ಲೆಯತ್ತ ಬರಲು ಎಸ್‍ಟಿಪಿಐ ಉಪಕೇಂದ್ರ ಸೂಕ್ತ ವೇದಿಕೆ ಕಲ್ಪಿಸಲಿದೆ. ದಾವಣಗೆರೆ ಸಂಸದರ ಸತತ ಪ್ರಯತ್ನದಿಂದ ಇದು ಸಾಕಾರಗೊಳ್ಳುತ್ತಿದೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ, ದಾವಣಗೆರೆಯಲ್ಲಿ ಎಸ್‍ಟಿಪಿಐ ಉಪಕೇಂದ್ರ ಪ್ರಾರಂಭಕ್ಕೆ ಕಳೆದ ಡಿಸೆಂಬರ್ ತಿಂಗಳಿನಿಂದಲೇ ಸಿದ್ಧತೆ ಪ್ರಾರಂಭಿಸಲಾಗಿತ್ತು. ಆದರೆ ಮುಕ್ತ ವಿ.ವಿ.ಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ವಿಷಯದಲ್ಲಿ ಸ್ವಲ್ಪ ವಿಳಂಬವಾಯಿತು. ಈಗಾಗಲೆ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿದೆ. ಮಾರ್ಚ್ ಒಳಗಾಗಿ ಎಲ್ಲ ಪ್ರಮುಖ ಸಿದ್ಧತೆಗಳು ಆಗಲಿವೆ. ಐಟಿ ಕಂಪನಿಗಳು ಹಾಗೂ ಸ್ಟಾರ್ಟ್‍ಅಪ್ ಕಂಪನಿಗಳಿಗೆ ಎಸ್‍ಟಿಪಿಐ ಉಪಕೇಂದ್ರವು ಉತ್ತಮ ವೇದಿಕೆಯಾಗಲಿದ್ದು, ಜಿಲ್ಲಾಡಳಿತವು ಇವುಗಳಿಗೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿಕೊಡಲಿದೆ. ಎಸ್‍ಟಿಪಿಐ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ಅವರು ದಾವಣಗೆರೆಯಲ್ಲಿ ಗುಜರಾತ್‍ನ ಗಾಂಧಿನಗರಕ್ಕೆ ಹೋಲಿಕೆ ಮಾಡಿ, ನಗರವು ಸ್ವಚ್ಛ ಹಾಗೂ ಸುಂದರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಗರವನ್ನು ಇನ್ನಷ್ಟು ಸ್ವಚ್ಛವಾಗಿಸಲು ಶ್ರಮಿಸಲಾಗುವುದು. ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ, ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಾವಣಗೆರೆ ಜಿಲ್ಲೆಗೆ ಎಸ್‍ಟಿಪಿಐ ಉಪಕೇಂದ್ರವು ಇನ್ನಷ್ಟು ಗರಿಮೆ ಮೂಡಿಸಲಿದೆ. ವಾರಕ್ಕೊಮ್ಮೆ ಇಲ್ಲಿನ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಸಂಸದರ ಮಾರ್ಗದರ್ಶನದಲ್ಲಿ ಎಸ್‍ಟಿಪಿಐ ಉಪಕೇಂದ್ರವನ್ನು ಆದಷ್ಟು ಶೀಘ್ರ ಸಿದ್ಧಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್‍ಟಿಪಿಐ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ದಾವಣಗೆರೆಯ ಜೆ.ಹೆಚ್.ಪಟೇಲ್ ನಗರದಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ ಗೆ ಭೇಟಿ ನೀಡಿ, ಸಿದ್ಧವಾಗುತ್ತಿರುವ ಎಸ್‍ಟಿಪಿಐ ಉಪಕೇಂದ್ರದ ಕಾಮಗಾರಿ ಪರಿಶೀಲನೆ ನಡೆಸಿದರು.ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಹುಬ್ಬಳ್ಳಿ ಎಸ್‍ಟಿಪಿಐ ಕೇಂದ್ರದ ಜಂಟಿನಿರ್ದೇಶಕ ಸಸಿಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಹಾಗೂ ಜಿಪಂ ಉಪಕಾರ್ಯದರ್ಶಿ ಆನಂದ್, ಪ್ರಸನ್ನ, ಯಶವಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top