Connect with us

Dvgsuddi Kannada | online news portal | Kannada news online

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯ-ವ್ಯಯ ಮಂಡನೆ;  159.17 ಕೋಟಿ  ಆದಾಯ ನಿರೀಕ್ಷೆ..!

ದಾವಣಗೆರೆ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯ-ವ್ಯಯ ಮಂಡನೆ;  159.17 ಕೋಟಿ  ಆದಾಯ ನಿರೀಕ್ಷೆ..!

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ( ದೂಡಾ) 2021-22ನೇ ಸಾಲಿನ ಯೋಜಿತ ಆಯವ್ಯಯ ಸಭೆ ಇಂದು  ನಡೆಯಿತು.

ಪ್ರಾಧಿಕಾರ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,  ಎಸ್.ಎ.ರವೀಂದ್ರನಾಥ್ ಉಪಸ್ಥಿತಿಯಲ್ಲಿ   ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಅವರು 159.17 ಕೋಟಿ ರೂ. ಗಳ ಆದಾಯದ ನಿರೀಕ್ಷೆಯಲ್ಲಿ 156.18 ಕೋಟಿ ರೂ. ಗಳ ನಿರೀಕ್ಷಿತ ವೆಚ್ಚದ 2021-22 ನೇ ಸಾಲಿನ ಆಯ-ವ್ಯಯ ಮಂಡಿಸಿದರು.

ದೂಡಾ 2021-22 ನೇ ಸಾಲಿನ ಆಯ-ವ್ಯಯದಲ್ಲಿ ಪ್ರಮುಖವಾಗಿ ಕುಂದುವಾಡ ಗ್ರಾಮದ ವಿವಿಧ ಸರ್ವೇ ನಂಬರುಗಳಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಜಮೀನು ಭೂ ಖರೀದಿ ಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 60 ಕೋಟಿ, ಮಾಸ್ಟರ್ ಪ್ಲಾನ್ ರಲ್ಲಿ ಕಾಯ್ದಿರಿಸಿರುವ ಉದ್ಯಾನವನ ಪ್ರದೇಶದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯ ಉದ್ಯಾನವನ ಮತ್ತು ಮೃಗಾಲಯ ಅಭಿವೃದ್ಧಿ ಪಡಿಸಲು 10 ಕೋಟಿ ರೂ., ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 5.30 ಕೋಟಿ ರೂ., ಪ್ರಾಧಿಕಾರದ ಸಿಬ್ಬಂದಿಗಳಿಗೆ ವಸತಿ ಸಮುಚ್ಛಯ ಹಾಗೂ ಅತಿಥಿ ಗೃಹ ನಿರ್ಮಾಣಕ್ಕೆ 5 ಕೋಟಿ ರೂ., ದಾವಣಗೆರೆ ಹಾಗೂ ಹರಿಹರ ನಗರ ಮಧ್ಯ ಭಾಗದಲ್ಲಿ ಬರುವ ದೊಡ್ಡಬಾತಿ ಕೆರೆಯನ್ನು ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಪ್ರೇಕ್ಷಣಿಯ ಸ್ಥಳವಾಗಿ ಮತ್ತು ಪ್ರವಾಸೋದ್ಯಮ ಹಾಗೂ ಜಲಕ್ರೀಡೆ ನಡೆಸಲು ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ರೂ.8.00 ಕೋಟಿಗಳನ್ನು ಕಾಯ್ದಿರಿಸಲಾಗಿದೆ.

ಉಳಿದಂತೆ ಶಿರಮಗೊಂಡನಹಳ್ಳಿ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸದಾಗಿ ಒಳಚರಂಡಿ ಕಾಮಗಾರಿಗೆ 2 ಕೋಟಿ, ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಸೈನಿಕರ ಉದ್ಯಾನವನಕ್ಕೆ ಹೆಚ್ಚುವರಿಯಾಗಿ ರೂ. 1 ಕೋಟಿ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಕುಂದುವಾಡ ಕೆರೆ ಬಳಿ ಇರುವ ಎಂ.ಬಿ.ಎ ಕಾಲೇಜುವರೆಗೆ ದ್ವಿಪಥ ರಸ್ತೆಯ ಎರಡು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದಕ್ಕೆ ಮುಂದುವರೆದು ದಾವಣಗೆರೆ ನಗರ ನಿವಾಸಿಗಳ ಸುಗಮ ಸಂಚಾರಕ್ಕೆ ಎಂ.ಬಿ.ಎ. ಕಾಲೇಜು ಹಾಗೂ ಕುಂದುವಾಡ ಕೆರೆಯ ಮಧ್ಯ ಭಾಗದಿಂದ ಬೈಪಾಸ್ ರಸ್ತೆಯವರಿಗೆ ರೂ. 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ.

ಜೆ.ಹೆಚ್.ಪಟೇಲ್ ಬಡಾವಣೆ ಅಭಿವೃದ್ಧಿ: ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರೂ.400 ಲಕ್ಷ, ಹೈಟೆನ್ಷನ್ ಲೈನ್ ಕೆಳಗಿರುವ ಬಫರ್ ಜೋನ್ ಗೆ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸಿ ವಾಕಿಂಗ್ ಪಾತ್ ನಿರ್ಮಿಸಲು ರೂ.70 ಲಕ್ಷ, ವಿಭಜಕದಲ್ಲಿ 9 ಮೀ ಎತ್ತರದ ಅಕ್ಟೋಗನಲ್ ಕಂಬಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ರೂ.40 ಲಕ್ಷ, ನಾಮಫಲಕದ ಕಮಾನು ನಿರ್ಮಿಸಲು ರೂ.20 ಲಕ್ಷ ಕಾಯ್ದಿರಿಸಲಾಗಿದೆ.

ನಕ್ಷೆ ಹಾಗೂ ಕಡತಗಳ ಗಣಕೀಕರಣ : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಎಲ್ಲಾ ನಕ್ಷೆಗಳು ಹಾಗೂ ಕಡತಗಳನ್ನು ಗಣಕೀಕರಣಗೊಳಿಸಿ ಸಾರ್ವಜನಿಕರಿಗೆ ಸುಲಭ ವೀಕ್ಷಣೆಗೆ ಅನುಕೂಲವಾಗುವಂತೆ ಮಾಡಲು ರೂ.2 ಕೋಟಿ ಕಾಯ್ದಿರಿಸಲಾಗಿದ್ದು, ಡಿ.ದೇವರಾಜ ಅರಸು ಬಡಾವಣೆಯಲ್ಲಿ ವರ್ತುಲ ರಸ್ತೆಯ ಪಕ್ಕದಲ್ಲಿನ (ಆರ್.ಟಿ.ಓ. ಕಛೇರಿ ಎದುರು) ಪ್ರಾಧಿಕಾರದ ನಿವೇಶನದಲ್ಲಿ ವಾಣಿಜ್ಯ ಸಂರ್ಕೀರ್ಣ ನಿರ್ಮಾಣಕ್ಕಾಗಿ ರೂ.5 ಕೋಟಿ ಕಾಯ್ದಿರಿಸಲಾಗಿದೆ.

ಡಿ.ದೇವರಾಜ ಅರಸು ಬಡಾವಣೆ ಸಿ ಬ್ಲಾಕ್‍ನಲ್ಲಿರುವ (ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ) ಪ್ರಾಧಿಕಾರದ ನಿವೇಶನವನ್ನು ಹದ್ದುಬಸ್ತು ಮಾಡಲಾಗಿದ್ದು, ಈ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ರೂ.1 ಕೋಟಿ ಹಾಗೂ ಉದ್ಯಾನವನ ಹದ್ದುಬಸ್ತು ಮಾಡಿ ಅಭಿವೃದ್ಧಿ ಪಡಿಸಲು ರೂ.2 ಕೋಟಿ ಕಾಯ್ದಿರಿಸಲಾಗಿದೆ. ಎಸ್.ನಿಜಲಿಂಗಪ್ಪ ಮತ್ತು ಡಿ.ದೇವರಾಜ ಅರಸು ಬಡಾವಣೆಗಳನ್ನು ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿದ್ದು, ಬಡಾವಣೆಗಳ ಮುಂಭಾಗದಲ್ಲಿ ನಾಮಫಲಕ ಕಮಾನುಗಳನ್ನು ನಿರ್ಮಿಸಲು ರೂ.50 ಲಕ್ಷ ಕಾಯ್ದಿರಿಸಲಾಗಿದೆ.

ವಿವಿಧ ಕೆರೆ, ಉದ್ಯಾನವನಗಳ ಅಭಿವೃದ್ಧಿಗೆ ಒತ್ತು : ದೂಡಾ ವ್ಯಾಪ್ತಿಯಲ್ಲಿನ ವಿವಿಧ ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ನಾಗನೂರು ಕೆರೆಗೆ ರೂ.44 ಲಕ್ಷ, ಹೊನ್ನೂರು ಕೆರೆಗೆ ರೂ.50 ಲಕ್ಷ, ಟಿ.ವಿ.ಸ್ಟೇಷನ್ ಕೆರೆಗೆ ರೂ.275 ಲಕ್ಷ, ಅಗಸನಕಟ್ಟೆ ಕೆರೆಗೆ ರೂ.25 ಲಕ್ಷ ಮೀಸಲಿರಿಸಲಾಗಿದೆ.

ಹರಿಹರ ನಗರದಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ಹಾಗೂ ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸಲು ರೂ.1 ಕೋಟಿ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಲ್ತಾನ್ ಪೇಟೆ, ಅನಪ್ಪ ಕೇರಿ, ಗಣೇಶ್ ಪೇಟೆ, ತೇಪರ್ ಬೀದಿ, ದೇವಾಂಗ ಪೇಟೆ ಹಾಗೂ ಕೊತ್ವಾಲ್ ಪೇಟೆಯಲ್ಲಿ ಸಿ ಸಿ ರಸ್ತೆ ನಿರ್ಮಿಸಿ ರಸ್ತೆಯ ಎರಡು ಬದಿಯಲ್ಲಿ ಪೈಪ್ ಚರಂಡಿ ನಿರ್ಮಿಸಲು ರೂ.1 ಕೋಟಿ ಕಾಯ್ದಿರಿಸಲಾಗಿದೆ.

ಶಾಬನೂರು ಗ್ರಾಮದ ರಿಸನಂ: 87/2ರಲ್ಲಿ ಕಾಯ್ದಿರಿಸಿದ ಉದ್ಯಾನವನ ಅಭಿವೃದ್ದಿಗೆ ರೂ.25 ಲಕ್ಷ, ಹರಿಹರ ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಡಿ.ಪಿ.ಆರ್. ತಯಾರಿಸಲು ರೂ.10 ಲಕ್ಷ ಹಾಗೂ ದಾವಣಗೆರೆ ನಗರದ ವಾರ್ಡ್ ನಂ.44 ರ ವ್ಯಾಪ್ತಿಯ ಎಸ್.ಎಸ್.ಲೇಔಟ್ ಬಿ ಬ್ಲಾಕ್‍ನಲ್ಲಿ ರಸ್ತೆ ಅಭಿವೃದ್ದಿ ಹಾಗೂ ಪಾರ್ಕ್ ಅಭಿವೃದ್ಧಿಗೆ ರೂ.2.30 ಕೋಟಿ ಕಾಯ್ದಿರಿಸಲಾಗಿದೆ.

ಬರುವ ವರ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾಧಿಕಾರದ ವತಿಯಿಂದ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಒಟ್ಟು ರೂ.299 ಲಕ್ಷಗಳ ನಿವ್ವಳ ಲಾಭ ನಿರೀಕ್ಷಿಸಲಾಗಿದೆ ಎಂದು ದೂಡಾ ಆಯುಕ್ತರು ಮಾಹಿತಿ ನೀಡಿದರು. ಸಭೆಯಲ್ಲಿ ದೂಡಾ ಸದಸ್ಯರಾದ ದೇವಿರಮ್ಮ ಆರ್.ಎಲ್., ಡಿ.ಎಲ್, ನಾಗರಾಜ ಎಂ. ರೋಖಡೆ, ಸೌಭಾಗ್ಯಮ್ಮ, ಡಿ.ವಿ.ಜಯರುದ್ರಪ್ಪ, ಹರಿಹರ ನಗರಸಭೆ ಪೌರಾಯುಕ್ತರು, ಪ್ರಾಧಿಕಾರದ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್.ಶ್ರೀಕರ್, ಲೆಕ್ಕಪರಿಶೋಧನಾಧಿಕಾರಿ, ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top