Connect with us

Dvgsuddi Kannada | online news portal | Kannada news online

ದಾವಣಗೆರೆ:  ಹಂದಿ ಸಾಕಾಣಿಕೆಗೆ ಪ್ರತ್ಯೇಕ ಸ್ಥಳ ನೀಡಲು ಜಿಲ್ಲಾಧಿಕಾರಿ ಸೂಚನೆ..!

ದಾವಣಗೆರೆ

ದಾವಣಗೆರೆ:  ಹಂದಿ ಸಾಕಾಣಿಕೆಗೆ ಪ್ರತ್ಯೇಕ ಸ್ಥಳ ನೀಡಲು ಜಿಲ್ಲಾಧಿಕಾರಿ ಸೂಚನೆ..!

ದಾವಣಗೆರೆ: ನಗರದ ಹೊರವಲಯದಲ್ಲಿ 2 ರಿಂದ 5 ಎಕರೆ ಸರ್ಕಾರಿ ಜಾಗವನ್ನು ಹಂದಿ ಸಾಕಾಣಿಕೆಗೆ ಗುರುತಿಸಿ ನೀಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಂದಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರ ಸೂಚನೆಯಂತೆ ಇಂದು ಸಭೆ ನಡೆಸಲಾಗುತ್ತಿದೆ ಎಂದರು.

ದಾವಣಗೆರೆ ನಗರದಲ್ಲಿ ಹೆಚ್ಚಿರುವ ಹಂದಿಗಳನ್ನು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವಂತೆ ಹಂದಿ ಮಾಲೀಕರಿಗೆ ತಿಳಿಸಿದ ಅವರು ಬಿಡಾಡಿ ಹಂದಿಗಳು ರಸ್ತೆಯ ಮೇಲೆ ತೆರೆದ ಜಾಗಗಳಲ್ಲಿ ಹೆಚ್ಚಾಗಿ ಓಡಾಡಲು ಸಾರ್ವಜನಿಕರೂ ಕಾರಣ. ತಮ್ಮ ಮನೆಗಳಲ್ಲಿ ಉಳಿದ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದೇ, ರಸ್ತೆ ಬದಿ ಬಿಸಾಕುವುದರಿಂದ ಹಂದಿಗಳಿಗೆ ಆಹಾರ ಸಿಕ್ಕಂತಾಗುತ್ತದೆ. ಹಾಗೂ ಮಹಾನಗರಪಾಲಿಕೆಯವರು ನಗರವನ್ನು ಸರಿಯಾಗಿ ಸ್ವಚ್ಚಗೊಳಿಸಿ ರಸ್ತೆಯ ಮೇಲೆ ಹಾಗೂ ಬದಿಗಳಲ್ಲಿ ಯಾವುದೇ ಆಹಾರ ಪದಾರ್ಥಗಳು ಸಿಗದಂತೆ ಮಾಡಿದರೆ ಅವುಗಳು ರಸ್ತೆಗಳ ಮೇಲೆ ಏಕೆ ಓಡಾಡುತ್ತವೆ ಎಂದು ಪ್ರಶ್ನಿಸಿದರು.

ಎಸ್‍ಎಸ್ ಲೇಔಟ್‍ನ ಒಂದು ರಸ್ತೆಯಲ್ಲಿ ಒಂದೇ ಒಂದು ಹಂದಿಗಳು ಕಾಣಬರುವುದಿಲ್ಲ. ಕಾರಣ ಆ ರಸ್ತೆಯಲ್ಲಿ ಯಾವುದೇ ತ್ಯಾಜ್ಯ ಸುರಿದಿರುವುದು, ಬಿದ್ದಿರುವುದು ಕಂಡು ಬಂದಿರುವುದಿಲ್ಲ. ಹಾಗಾಗಿ ಈ ಹಂದಿಗಳ ಹಾವಳಿ ತಪ್ಪಿಸುವ ವಿಚಾರದಲ್ಲಿ ಹಂದಿ ಮಾಲೀಕರು, ಸಾರ್ವಜನಿಕರು, ಮಹಾನಗರಪಾಲಿಕೆಯವರು ಎಲ್ಲರೂ ಒಮ್ಮತದಿಂದ ಕಾರ್ಯ ನಿರ್ವಹಿಸಿದರೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಹಂದಿಗಳು ಹೀಗೆ ಎಲ್ಲೆಂದರಲ್ಲಿ ಓಡಾಡುವುದರಿಂದ ಹಲವಾರು ಖಾಯಿಲೆಗಳಾದ ಡೆಂಗಿ, ಜಪಾನಿಸ್ ಎನ್‍ಸೆಫಲಿಟಿಸ್ ಹಾಗೂ ಹಂದಿ ಜ್ವರದಂತಹ ರೋಗಗಳು ಬರಲಿದ್ದು, ಒಮ್ಮೊಮ್ಮೆ ದಿಢೀರನೆ ನುಗ್ಗುವ ಹಂದಿಗಳಿಂದ ದ್ವಿಚಕ್ರ ವಾಹನ ಸವಾರರು ರಸ್ತೆಗಳ ಮೇಲೆ ಬಿದ್ದು, ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಹಾಗಾಗಿ ಹಂದಿ ಮಾಲೀಕರು ತಮ್ಮ ಸ್ವಂತ ಸ್ಥಳಗಳಲ್ಲಿ ಹಂದಿ ಸಾಕಾಣಿಕೆ ಮಾಡುವುದು ಸೂಕ್ತ ಎಂದರು.

ಹಂದಿ ಮಾಲೀಕರ ಸಂಘದ ಅಧ್ಯಕ್ಷ ಆನಂದಪ್ಪ ಮಾತನಾಡಿ, ನಾವೀಗಾಗಲೇ ಮಹಾನಗರಪಾಲಿಕೆಯಿಂದ ಸ್ಥಳ ಕೇಳಿದ್ದೇವೆ. ಹಾಗೂ ನಗರಪಾಲಿಕೆಯವರು ಸಂಗ್ರಹಿಸುವ ತ್ಯಾಜ್ಯದಿಂದ ಉಳಿಯುವ ಆಹಾರಗಳನ್ನು ಕೊಟ್ಟರೆ ನಮಗೆ ಸಹಾಯವಾಗುತ್ತದೆ. ನಮ್ಮ ಜನಾಂಗ ಕಾಲಾಂತರದಿಂದ ಇದೇ ಕಸುಬನ್ನು ಅವಲಂಬಿಸಿದೆ. ಈ ಹಿಂದೆ ಪೊರಕೆ ಹಾಗೂ ಬುಟ್ಟಿಗಳನ್ನು ಎಣೆಯುತ್ತಿದ್ದರು. ಆದರೆ ಪೊರಕೆ, ಬುಟ್ಟಿಗಳಿಗೆ ಕಚ್ಚಾ ವಸ್ತುಗಳು ದೊರೆಯದಿರುವುದರಿಂದ ಹಂದಿ ಸಾಕಾಣಿಕೆಯೊಂದೇ ನಮಗೆ ಉಪ ಜೀವನವಾಗಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಮಂದಿ ಇದೇ ಕಸುಬನ್ನು ಮಾಡಿಕೊಂಡಿರುತ್ತೇವೆ. ನಮಗೂ ಸಾರ್ವಜನಿಕರ ಆರೋಗ್ಯದ ರಕ್ಷಣೆಯ ಅರಿವಿದೆ. ಹಾಗೂ ನಗರ ಅಂದವಾಗಿರಬೇಕೆಂಬುದು ನಮ್ಮ ಆಸೆ ಕೂಡ. ಹಾಗಾಗಿ ನಗರಕ್ಕೆ ಹತ್ತಿರವಾಗಿರುವ ಸ್ಥಳದಲ್ಲಿ ಜಾಗ ಕೊಟ್ಟರೆ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ತಹಶೀಲ್ದಾರರ ಸಹಾಯದಿಂದ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಸ್ಥಳ ಗುರುತಿಸಿ ಹಂದಿ ಮಾಲೀಕರಿಗೆ ನೀಡಿ, ಆದಷ್ಟು ಬೇಗ ಸಮಸ್ಯೆಗೆ ಇತಿಶ್ರೀ ಹಾಡಿರಿ ಎಂದರು. ಇದರೊಂದಿಗೆ ಸಾರ್ವಜನಿಕರು ತಮ್ಮ ಮನೆಗಳನ್ನು ಸ್ವಚ್ಚಗೊಳಿಸಿದಂತೆ ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಮುಖ್ಯ. ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಸ್ವಚ್ಚತಾ ಸಿಬ್ಬಂದಿ ಇದ್ದು, ಸರಿಯಾಗಿ ಕಾರ್ಯ ನಿರ್ವಹಿಸಿದರೆ ಈ ಸಮಸ್ಯೆ ಪರಿಹರಿಸಬಹುದಾಗಿದೆ ಎಂದರು.

ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯಕುಮಾರ್ ಮಾತನಾಡಿ, ಈ ಹಿಂದೆ ಹಂದಿ ಸಾಕಾಣಿಕೆಗೆ ಜಾಗ ಗುರುತಿಸಲಾಗಿತ್ತು. ಆದರೆ ಆ ಸ್ಥಳ ದೂರವಾಗುತ್ತದೆ ಎಂದು ಮಾಲೀಕರು ನಿರಾಕರಿಸಿದ್ದರು. ಮತ್ತೊಮ್ಮೆ ಸ್ಥಳ ಗುರುತಿಸಿಕೊಡಲಾಗುವುದು. ನಾಗರೀಕರ ಆರೋಗ್ಯ ಹಾಗೂ ಸ್ಮಾರ್ಟ್ ಸಿಟಿ ಅಂದ ಹೆಚ್ಚಿಸಲು ಹಂದಿ ಮಾಲೀಕರು ಸಹಕರಿಸಬೇಕೆಂದರು.

ಸಭೆಯಲ್ಲಿ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ಜಯಮ್ಮ ಗೋಪ್ಯಾನಾಯ್ಕ್, ಗೌರಮ್ಮ ಗಿರೀಶ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಪಾಲಿಕೆ ಆರೋಗ್ಯಾಧಿಕಾರಿ ಸಂತೋಷ್, ಇತರೆ ಅಧಿಕಾರಿಗಳು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top