ದಾವಣಗೆರೆ: ಸಾರ್ವಜನಿಕವಾಗಿ ಆರ್ಯುಪೂಜೆ-ವಿಜಯದಶಮಿ ಮತ್ತು ಈದ್‍ಮಿಲಾದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡಲು ಯುವ ಸಮೂಹಕ್ಕೆ ಹಿರಿಯರ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಜಯದಶಮಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ‘ನಾಗರಿಕ ಸೌಹಾರ್ದ ಸಮನ್ವಯ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಯುಧ ಪೂಜೆ ವಿಜಯದಶಮಿ ಮತ್ತು ಈದ್‍ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ನಡೆಸಲಾಗುವ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯಾ ಸಮುದಾಯದ ಮುಖಂಡರು ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಗರವು ಸ್ಮಾರ್ಟ್‍ಸಿಟಿ ಆಗುತ್ತಿದ್ದು, ಜನರು ಕೂಡ ಸ್ಮಾರ್ಟ್ ಆಗುವ ಮೂಲಕ ಉತ್ತಮ ಅತ್ಯುತ್ತಮ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡೋಣ ಎಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಜಿಲ್ಲೆಯಾದ್ಯಂತ ಹಿಂದಿನಿಂದಲೂ ಶಾಂತಿ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಮುಂದೆಯೂ ಇದೆ ರೀತಿ ಹಬ್ಬಗಳನ್ನು ಆಚರಿಸಲು ಸಹಕಾರ ನೀಡಬೇಕು. ವಿವಿಧ ಧರ್ಮಗಳ ಮುಖಂಡರು ಹಬ್ಬದ ದಿನಗಳಲ್ಲಿ ಪರಸ್ಪರ ಸಿಹಿತಿನಿಸಿ ಹಬ್ಬವನ್ನು ಆಚರಿಸುವುದು ಉತ್ತಮ ಬೆಳವಣಿಗೆಯಾಗಿದೆ. ನಗರದಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ಅಳವಡಿಸುವುದರ ಕುರಿತು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖಂಡ ವೈ.ಮಲ್ಲೇಶ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಾರ್ವಜನಿಕ ವಿಜಯದಶಮಿ ಆಚರಣೆ ಮಹೋತ್ಸವ ಸಮಿತಿ ವತಿಯಿಂದ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಿಕೊಂಡು ಬರಲಾಗುತ್ತಿದೆ. ಇದುವರೆಗೂ ಯಾವುದೇ ಅಹಿತಕರಗಳು ಘಟನೆಗಳು ನಡೆದಿಲ್ಲ. ಮುಂದೆಯೂ ಕೂಡ ಇದೇ ರೀತಿ ಹಬ್ಬವನ್ನು ಶಾಂತಯುತವಾಗಿ ಆಚರಿಸಲಾಗುವುದು ಎಂದರು.
ಯಾಸಿನ್.ಪಿ.ರಜ್ವಿ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಈದ್‍ಮಿಲಾದ್ ಹಬ್ಬವನ್ನು ಆಚರಿಸಲಾಗುವುದು. ಹಬ್ಬದ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಯುತವಾಗಿ ಮೆರವಣಿಗೆಯನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್, ಶಂಕರ್ ನಾರಾಯಣ್, ಸಾದಿಕ್ ಪೈಲ್ವಾನ್, ನಜೀರ್ ಅಹ್ಮದ್, ಗೌಡ್ರು ಚಂದ್ರಪ್ಪ, ಎ.ನಾಗರಾಜ್, ಟಿಪ್ಪು ಸಾಹೇಬ್,ಸೋಗಿ, ಶಾಂತಕುಮಾರ್, ಆರ್.ಬಿ ರಂಗಪ್ಪ ಮಾತನಾಡಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ ಹಾಗೂ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.