Connect with us

Dvgsuddi Kannada | online news portal | Kannada news online

ದಾವಣಗೆರೆ: ಜ್ಞಾನ ದಾಸೋಹದ ಹರಿಕಾರ ಸಿದ್ದೇಶ್ವರ ಶ್ರೀಗಳು; ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ

ದಾವಣಗೆರೆ: ಜ್ಞಾನ ದಾಸೋಹದ ಹರಿಕಾರ ಸಿದ್ದೇಶ್ವರ ಶ್ರೀಗಳು; ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ; ಸಿದ್ದೇಶ್ವರ ಶ್ರೀಗಳು ಹಲವು ದಶಕಗಳಿಂದ ನಾಡಿನಾದ್ಯಂತ ನಿರಂತರವಾಗಿ ಜ್ಞಾನ ದಾಸೋಹ ನೀಡುವ ಮೂಲಕ ಅರಿವಿನ ಗುರುವಾಗಿದ್ದರು. ಅವರ ಪ್ರತಿ ನುಡಿಗಳು ಅನುಕರಣೀಯವಾಗಿದ್ದವು ಎಂದು ಬಿ.ವಾಮದೇವಪ್ಪ ನುಡಿದರು.

ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ನುಡಿ ನಮನವನ್ನು ಸಲ್ಲಿಸಿ ಮಾತನಾಡಿದರು. ಅತ್ಯಂತ ಸರಳವಾದ ಅವರ ಪ್ರವಚನದ ಭಾಷೆಯಲ್ಲಿ ಗಾಂಭೀರ್ಯ ತುಳುಕಾಡುತ್ತಿತ್ತು. ಅವರ ಉಪದೇಶಗಳು ಜನರ ತಕ್ಷಣದ ಬದುಕಿನೊಂದಿಗೆ ಸಂಬಂಧ ಸಾಧಿಸುತ್ತಿದ್ದುವು. ಭಾವೈಕ್ಯತೆಯ ಪ್ರತಿರೂಪವಾಗಿದ್ದ ಶ್ರೀಗಳು ಎಂದಿಗೂ ಹಿಂದೂ ಮುಸ್ಲಿಂ ಎಂದು ತಾರತಮ್ಯವನ್ನು ಮಾಡದೇ ವಚನಕಾರರ ಹಾಗೂ ತತ್ವಪದಕಾರರ ಅಪೂರ್ವ ಸಂಗಮದಂತಿದ್ದರು ಎಂದರು.

ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಬಂಧುತ್ವ ಮತ್ತು ಸಹಬಾಳ್ವೆಯನ್ನು ಬೆಸೆಯುವ ಅವರ ಸಂದೇಶಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತಿದ್ದವು. ತಮ್ಮ ನಡೆ ಮತ್ತು ನುಡಿಯನ್ನು ಒಂದೇ ಮಾಡಿಕೊಂಡು ಆಧುನಿಕ ಗಾಂಧೀಜಿ ಎಂದು ಭಕ್ತ ಸಮೂಹದಿಂದ ಕರೆಸಿಕೊಂಡ ಶ್ರೀಗಳು ಮನುಕುಲದ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು ಎಂದು ತಮ್ಮ ನುಡಿ ನಮನವನ್ನು ಸಲ್ಲಿಸಿದರು.

ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಪ್ರೀತಿ, ಮಮತೆ ಹಾಗೂ ಸಮಯ ಪ್ರಜ್ಞೆಯ ಪ್ರತಿರೂಪವಾಗಿದ್ದರು. ಸ್ವತಃ ತಾವೇ ಅತೀ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತ ಆಧ್ಯಾತ್ಮಿಕ, ಕಾಯಕ ಹಾಗೂ ಮಾನವೀಯ ಮೌಲ್ಯಗಳ ಬೋಧನೆಗಳ ಮೂಲಕ ಜನರಿಗೆ ಸರಳ ಬದುಕನ್ನು ನಡೆಸುವ ರೀತಿಯನ್ನು ಕಲಿಸಿದರು. ಶ್ರೀಗಳು ಪದ್ಮಶ್ರೀ, ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದನ್ನೇ ತನ್ನ ಬದುಕಿನ ಪರಮ ಗುರಿಯಾಗಿರಿಸಿಕೊಂಡ ಅಪರೂಪದ ಸ್ವಾಮೀಜಿಯಾಗಿದ್ದರು. ಆರೋಗ್ಯಪೂರ್ಣ ಮನಸ್ಸಿನ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸು ಕಂಡು ಅದರ ಸಾಕಾರಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ಅಪರೂಪದ ಮಹಾ ಚೇತನವಾಗಿದ್ದರು ಎಂದರು.

ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ ಮಾತನಾಡಿ ಶರಣರ ಗುಣವನ್ನು ಮರಣದಲ್ಲಿ ಕಾಣು ಎಂದು ಹಿರಿಯರು ಹೇಳಿದ್ದಾರೆ. ಜಾಗತಿಕ ದಾರ್ಶನಿಕರ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ ಶ್ರೀಗಳು ದೃಷ್ಟಾಂತ, ಉದಾಹರಣೆಗಳೊಂದಿಗೆ ಕೇಳುಗರ ಮನಮುಟ್ಟುವಂತೆ ಪ್ರವಚನವನ್ನು ಅತ್ಯಂತ ಸರಳವಾಗಿ ಬೋಧಿಸುತ್ತಿದ್ದರು ಎಂದರು.

ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಅರಿವು ದೊಡ್ಡದಲ್ಲ ಆಚಾರ ದೊಡ್ಡದು ಎನ್ನುವ ಶರಣರ ಮಾತಿನಂತೆ ಕಾಯಕ, ದಯೆ, ಮಾನವೀಯತೆಯ ಮೌಲ್ಯಗಳೇ ಎಲ್ಲಕ್ಕಿಂತ ಶ್ರೇಷ್ಠವೆಂದು ಅನುಯಾಯಿಗಳಿಗೆ ತಿಳಿ ಹೇಳುತ್ತಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರು ತಮ್ಮ ನುಡಿನಮನವನ್ನು ಸಲ್ಲಿಸಿದರು.ಜಾನಪದ ಕಲಾವಿದೆ ರುದ್ರಾಕ್ಷಿ ಬಾಯಿ ಪುಟ್ಟ ನಾಯ್ಕ್ “ಎಲ್ಲೋ ಹುಡುಕಿದೆ ಕಾಣದ ದೇವರ” ಎನ್ನುವ ಭಾವಗೀತೆಯನ್ನು ಹಾಡುವ ಮೂಲಕ ತಮ್ಮ ಗಾಯನ ನಮನವನ್ನು ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಸಿ‌.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಎ.ಮಹಾಲಿಂಗಪ್ಪ, ಎ.ಬಿ.ರಾಮಚಂದ್ರಪ್ಪ, ರಂಗಕರ್ಮಿ ಸಿದ್ದರಾಜು, ಕೆ.ಎನ್.ಸ್ವಾಮಿ, ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ರುದ್ರಾಕ್ಷಿ ಬಾಯಿ, ಸತ್ಯಭಾಮ ಮಂಜುನಾಥ್, ಭೈರವೇಶ್ವರ, ತಾಲೂಕು ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ, ಬೇತೂರು ಷಡಾಕ್ಷರಪ್ಪ, ಪರಿಮಳಾ ಜಗದೀಶ್, ಸೌಭಾಗ್ಯ, ಜಿಲ್ಲಾ ಹಾಗೂ ಕಸಾಪ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top