ದಾವಣಗೆರೆ; ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಅಕ್ರಮ ವನ್ಯಜೀವಿಗಳ ಪತ್ತೆ ಪ್ರಕರವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹೀಗಾಗಿ ಮಾಜಿ ಸಚಿವ ಮಲ್ಲಿಕಾರ್ಜುನ್ ಕೂಡಲೇ ಬಂಧನ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಫ್‌ಒ ಸೂಕ್ತ ಕ್ರಮ ಕೊಳ್ಳದೆ ಯಾವುದೋ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಸರಿಯಾದ ತನಿಖೆಯನ್ನೂ ಮಾಡಿಲ್ಲ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದೇನೆ. ಹಾಗೆಯೇ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕರು ಈ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದರು.
ಡಿಎಫ್‌ಒ ನನ್ನ ಕೈಗೂ ಸಿಕ್ಕಿಲ್ಲ. ಮಾಧ್ಯಮವರ ಕೈಗೂ ಸಿಗದೇ ತಲೆಮರೆಸಿಕೊಂಡಿರಬಹುದು. ಇಂತಹ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಿ, ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಮನವಿ ಮಾಡುತ್ತೇನೆ. ಸೋಮವಾರ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ವರದಿ ಕೇಳಿದೆ. ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸುತ್ತೇನೆ. ಡಿಎಫ್‌ಒ ತಪ್ಪು ಮಾಡಿದ್ದರೆ ಅಮಾನತು ಮಾಡಬೇಕು ಎಂದರು.
ಮಲ್ಲಿಕಾರ್ಜುನ್ ಅವರ ಒಡೆತನದ ರೈಸ್ ಮಿಲ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಲ್ಲೇ ಊಟ, ಕೆಲಸ ಹಾಗೂ ಪಾರ್ಟಿ ಮಾಡುತ್ತಾರೆ. ಅವರು ಅಲ್ಲೇ ಹೆಚ್ಚು ಹೊತ್ತು ಇರುತ್ತಾರೆ. ಆದರೂ ಎಫ್‌ಐಆರ್ ಹಾಗೂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಕಲ್ಲೇಶ್ವರ ರೈಸ್ ಮಿಲ್ ಆವರಣದ ಸ್ಥಳದ ಮಾಲೀಕರು ನಾಲ್ಕನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಮಾಲೀಕ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಮೊದಲ ಆರೋಪಿಯನ್ನಾಗಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ಪ್ರಕರಣದಲ್ಲಿ ಡಿಎಫ್‌ಒ ಶಾಮೀಲಾಗಿರುವ ಸಾಧ್ಯತೆ ಇರುವ ಕಾರಣಕ್ಕೆ ಇನ್ನು ಬಂಧನ ಆಗಿಲ್ಲ ಎಂದು ತಿಳಿಸಿದರು.
ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ.ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75 ನೇ ಹುಟ್ಟುಹಬ್ಬದ ವೇಳೆ ಪಾರ್ಟಿ ಮಾಡಲಾಗಿತ್ತು. ಸಿದ್ದರಾಮಯ್ಯ ಜಿಂಕೆ, ಕಾಡು ಹಂದಿ ಮಾಂಸ ಸೇರಿದಂತೆ ಬಾಡೂಟ ಸೇವಿಸಬಹುದು ಎಂದು ಜನ ಹೇಳುತ್ತಿದ್ದಾರೆ. ಇದು ನಿಜ ಆಗಿದ್ದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರಾಣಿ ಕೊಂಬು, ಚರ್ಮ ಸಿಕ್ಕರೆ ಪ್ರಾಣಿಗಳು ಎಲ್ಲಿ ಹೋದವು. ಜಿಂಕೆಯ ಕೊಂಬು, ಕೋರೆ ಹಲ್ಲು ಯಾಕೆ ಮಾರಾಟಕ್ಕೆ ಕಳುಹಿಸಿದರು ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಅಧ್ಯಕ್ಷ ಎ. ವೈ. ಪ್ರಕಾಶ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ಎಸ್. ಜಗದೀಶ್, ಜಿಲ್ಲಾ ವಕ್ತಾರ ಶಿವಶಂಕರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಸದಸ್ಯರಾದ ಸೋಗಿ ಶಾಂತಕುಮಾರ್ ಮತ್ತಿತರರು ಹಾಜರಿದ್ದರು.



