ದಾವಣಗೆರೆ: ವಿವಿಧ ಜಾತಿ, ಧರ್ಮ, ವೈವಿಧ್ಯತೆಯ ಭೌಗೋಳಿಕ ಪರಿಸ್ಥಿತಿ ಹೊಂದಿದ್ದರೂ ನಮ್ಮ ದೇಶ ಒಗ್ಗಟ್ಟಿನಿಂದಿರುವುದಕ್ಕೆ ಸಂವಿಧಾನ ಮುಖ್ಯ ಕಾರಣ. ಅಂತಹ ಶ್ರೇಷ್ಠ ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡು ಅಂಬೇಡ್ಕರ್ ಅವರ ಚಿಂತನೆಯ ಬೆಳಕಿನಲ್ಲಿ ನಾವು ಸಾಗಬೇಕಾಗಿದೆ ಎಂದು ಜಿ.ಪಂ. ಸಿಇಓ ಡಾ. ಎ.ಚೆನ್ನಪ್ಪ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಅಂಬೇಡ್ಕರ್ ಅವರ 66 ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟದ ಜೀವನ ನಡೆಸಿದರೂ ಕುಗ್ಗದೆ ಉನ್ನತ ಶಿಕ್ಷಣದ ಮೂಲಕ ಜ್ಞಾನ ಸಂಪಾದಿಸಿ, ಆ ಜ್ಞಾನದ ಬೆಳಕಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ನೀಡಿದ ಹೆಗ್ಗಳಿಕೆ ಅವರದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಪರ ಜಿಲ್ಲಾಧಿಕಾರಿ ಡಾ. ಪಿಎನ್.ಲೋಕೇಶ ಅವರು ಮಾತನಾಡಿ, ಸಂವಿಧಾನ ಶಿಲ್ಪಿ, ಜ್ಞಾನ ರತ್ನ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರರು ಶಿಕ್ಷಣದಿಂದ ತಮ್ಮ ಜ್ಞಾನದ ಪರಧಿ ಹೆಚ್ಚಿಸಿಕೊಂಡವರು, ಶಿಕ್ಷಣ ಎಂಬ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಧ್ವನಿಯಾದವರು. ಅಪಾರ ಜ್ಞಾನ ಹೊಂದಿದ್ದರಿಂದಲೇ ಅವರು ಪ್ರಪಂಚ ಗುರುತಿಸುವಂತಹ ವ್ಯಕ್ತಿಯಾಗಿದ್ದರು, ಅದರಿಂದಾಗಿ ಇಡೀ ಪ್ರಪಂಚ ಅವರನ್ನು ಗೌರವಿಸುತ್ತಿದೆ. ಅವರ ಆದರ್ಶಗಳನ್ನು ನಾವುಗಳು ಪ್ರತಿ ಹೆಜ್ಜೆಯಲ್ಲಿಯೂ ಪಾಲಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಗ್ಗೆರೆ ರಂಗಪ್ಪ ಮತ್ತು ಐರಣಿ ಚಂದ್ರು ಅಂಬೇಡ್ಕರ್ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.