ದಾವಣಗೆರೆ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಈ ಹಿಂದೆಯೇ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಹೆಸರಿಡಲಾಗಿತ್ತು. ಈಗ ಬಿಜೆಪಿಯವರು ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಪಾಲಿಕೆ ವಿಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪರು ನೀಡಿರುವ ಕೊಡುಗೆ ಅಪಾರ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಬಡವರ, ದಲಿತರ, ಅಲ್ಪಸಂಖ್ಯಾತರಿಗೆ ಸಹಾಯ ಮಾಡಿದ ಶಾಮನೂರು ಶಿವಶಂಕರಪ್ಪ, ಕೊಡುಗೈ ದಾನಿ ಅಂತಾನೇ ಪ್ರಸಿದ್ಧಿ. ಅವರ ಹೆಸರು ಬದಲಿಸಲು ಹೊರಟಿರುವ ಬಿಜೆಪಿ ಕೀಳುಮಟ್ಟದ, ಲಜ್ಜೆಗೆಟ್ಟ, ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೀವಂತವಾಗಿರುವ ವ್ಯಕ್ತಿಗಳ ಹೆಸರು ನಾಮಕರಣ ಮಾಡಬಾರದು ಎನ್ನುವ ಬಿಜೆಪಿಗರು ಬಸ್ ತಂಗುದಾಣಕ್ಕೆ ಸತ್ತವರ ಹೆಸರು ಇಟ್ಟಿದ್ದಾರೆಯೇ? ಎಲ್ಲಾ ಕಡೆಗಳಲ್ಲಿಯೂ ಶಾಸಕರು, ಸಂಸದರ ಹೆಸರಿಡಲಾಗಿದೆ. ಹಿರಿಯರಿಗೆ ಗೌರವ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಯೋಜನೆಗಳು ಇಲ್ಲವೇ? ಎಲ್ಲದ್ದಕ್ಕೂ ಮೃತಪಟ್ಟ ಮಹನೀಯರ ಹೆಸರು ಇಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ಸುಳ್ಳು ಹೇಳುವುದು, ದಾರಿ ತಪ್ಪಿಸುವುದು, ಸರಿಯಾಗಿ ಇದ್ದದ್ದನ್ನು ಹಾಳು ಮಾಡುವುದು, ಧರ್ಮ ಧರ್ಮಗಳ ನಡುವೆ ಹಾಗೂ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿ ಕೆಲಸ. ಒಂದು ವೇಳೆ ಶಾಮನೂರು ಶಿವಶಂಕರಪ್ಪರ ಹೆಸರು ತೆಗೆದು ಹಾಕಿದರೆ ಸರಿಯಾದ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗಣೇಶ್ ಹುಲ್ಲುಮನಿ, ಉಮೇಶ್, ಜಗದೀಶ್ ಉಪಸ್ಥಿತರಿದ್ದರು.



