ದಾವಣಗೆರೆ: ನಗರದ ಗೀತಾಂಜಲಿ ಚಿತ್ರಮಂದಿರದ ಎದುರು ನಡೆಯುತ್ತಿರುವ ರೈಲ್ವೆ ಅಂಡರ್ ಪಾಸ್ ತಡೆ ಗೋಡೆ ದಿಢೀರ್ ಕುಸಿದಿದೆ. ಇದಕ್ಕೆ ಕಳಪೆ, ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಕಿಡಿಕಾರಿದರು.
ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿ, ಬಿಜೆಪಿ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಅಂದರೆ ಬಿಜೆಪಿ. ಚುನಾವಣೆಗೆ ಹಣ ಖರ್ಚು ಮಾಡಲು ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಜನರು ತಾಳ್ಮೆ ಕಳೆದುಕೊಂಡಿದ್ದಾರೆ. ಅಭಿವೃದ್ಧಿಹೀನ, ಭ್ರಷ್ಟಾಚಾರಿಗಳಿಗೆ ಕುಮ್ಮಕ್ಕು ನೀಡುವ ಆ ಪಕ್ಷದ ನಾಯಕರಿಗೆ ನಾಚಿಕೆಯಾಗಬೇಕು. ವಿರೋಧ ಪಕ್ಷ ಸತ್ಯ ಹೊರತೆಗೆದರೆ ಉಡಾಫೆ ಮಾತನಾಡುವ ಸಂಸದರಿಗೆ ನಾಚಿಕೆಯಾಗಬೇಕು ಎಂದರು.
ಕಳೆದ ತಿಂಗಳಷ್ಟೇ ರೈಲ್ವೆ ಅಂಡರ್ ಪಾಸ್ ಕಾಮಕಾರಿ ಕೈಗೊಳ್ಳಲಾಗಿತ್ತು. ದಿಢೀರ್ ಕುಸಿಯಲು ಅಧಿಕಾರಿಗಳು, ಗುತ್ತಿಗೆದಾರರೇ ಕಾರಣ. ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿರುವ ಸಂಸದರೇ ಇದಕ್ಕೆ ನೇರ ಹೊಣೆ ಹೊರಬೇಕಾಗುತ್ತದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಡಿಸಿಎಂ ಟೌನ್ ಶಿಪ್, ಎಪಿಎಂಸಿ ಸೇತುವೆ ಕೆಳಗಿನ ಅಂಡರ್ ಬ್ರಿಡ್ಜ್ ಹಾಗೂ ಗೀತಾಂಜಲಿ ಥಿಯೇಟರ್ ಎದುರಿನ ರೈಲ್ವೆ ಕೆಳ ಸೇತುವೆ ಕುಸಿದಿರುವ ಕಾಮಗಾರಿಗಳು ಆಡಳಿತ ಪಜ್ಷಕ್ಕೆ ಕಪ್ಪು ಚುಕ್ಕೆಗಳು. ಬಿಜೆಪಿಯ ಅವೈಜ್ಞಾನಿಕ ಈ ಮೂರು ಕಾಮಗಾರಿಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಕೆಲವೆಡೆ ಕಳಪೆ ಕಾಮಗಾರಿ ನಡೆದಿದೆ. ಈಗ ಅಂಡರ್ ಪಾಸ್ ಕುಸಿದಿರುವುದು ನೋಡಿದರೆ ಬಿಜೆಪಿಯವರಿಗೆ ಜನರ ಹಿತ ಬೇಕಾಗಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಹಾಗೂ ಕಮೀಷನ್ ದಂಧೆಯಲ್ಲಿ ತೊಡಗಿರುವ ಇಂತವರಿಂದ ನಿರೀಕ್ಷಿಸಲು ಏನು ಸಾಧ್ಯ ಎಂದು ಪ್ರಶ್ನಿಸಿದರು.
ಪ್ರತಿಯೊಂದರಲ್ಲಿಯೂ ಕಮೀಷನ್ ಹಾಗೂ ಲಂಚಗುಳಿತನಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಯವರು ಈ ಬಗ್ಗೆ ಉತ್ತರಿಸಲಿ. ಕಳಪೆ ಕಾಮಗಾರಿ ನಡೆದಿಲ್ಲವೆಂದಾದರೆ ಕುಸಿತ ಆಗಿರುವುದು ಏಕೆ? ಕಳಪೆ ಗುಣಮಟ್ಟ, ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯವರಿಗೆ ಜನರು ಉಗಿಯುವ ಕಾಲ ದೂರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.



