ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಿದ ಕರ್ನಾಟಕ ಸರ್ಕಾರಕ್ಕೆ ಜಿಲ್ಲೆಯ ಸಮಗ್ರ ಕನ್ನಡಿಗರ ಪರವಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಧನ್ಯವಾದ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಹಾಗೂ ಕನ್ನಡ ನಾಡು ನುಡಿಯ ಮೇಲೆ ಅವರಿಗಿದ್ದ ಅದಮ್ಯವಾದ ಪ್ರೀತಿಯ ದ್ಯೋತಕವಾಗಿ ಸ್ಥಾಪಿತವಾದ ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು 107 ವರ್ಷಗಳ ಸುದೀರ್ಘ ಹಾಗೂ ಭವ್ಯವಾದ ಇತಿಹಾಸವನ್ನು ಹೊಂದಿದೆ.
ಎಲ್ಲ ಕನ್ನಡ ಸಂಘ-ಸಂಸ್ಥೆಗಳ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನೇಕ ಪ್ರಾಥಃಸ್ಮರಣೀಯರು ಅಧ್ಯಕ್ಷರಾಗಿ ಕನ್ನಡ ಕಟ್ಟುವಲ್ಲಿ ಹಾಗೂ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ರಾಯಭಾರಿಗಳಾಗಿ ನಾಡಿನುದ್ದಗಲಕ್ಕೂ ಕನ್ನಡ ಪ್ರೇಮವನ್ನು ಹೆಚ್ಚಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅತ್ಯಂತ ಕ್ರಿಯಾಶೀಲತೆಯಿಂದ ಕನ್ನಡಪರ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಯಾವುದೇ ಸರ್ಕಾರ ಸಚಿವರ ಸ್ಥಾನಮಾನವನ್ನು ನೀಡಿರಲಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ-ಗರಿಮೆ, ಇತಿಹಾಸವನ್ನು ಮನಗಂಡು, ನಾಡು-ನುಡಿಗೆ ಪರಿಷತ್ತು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು, ಅನೇಕ ಕ್ರಾಂತಿಕಾರಿ ಬದಲಾವಣೆಯ ಮುಖೇನ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಕಾರ್ಯವೈಖರಿಯನ್ನು ಗಮನಿಸಿ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಅತ್ಯಂತ ಹರ್ಷದಾಯಕ ವಿಷಯವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಕನಿಷ್ಠ ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದ್ದು, ಜನಸಾಮಾನ್ಯರು ಪರಿಷತ್ತಿನ ಸದಸ್ಯರಾಗಬೇಕೆಂಬ ಸದುದ್ದೇಶದಿಂದ ಹಾಗೂ ಗ್ರಾಮಮಟ್ಟಕೆ ಪರಿಷತ್ತನ್ನು ಕೊಂಡೊಯ್ಯಬೇಕೆಂಬ ದೃಷ್ಟಿಯಿಂದ ಸದಸ್ಯತ್ವ ಶುಲ್ಕವನ್ನು ರೂ. 250-00 ಗಳಿಗೆ ಇಳಿಸಿ, ಆನ್‌ಲೈನ್‌ನಲ್ಲಿ ನೊಂದಾಯಿಸಲು ಆಧುನಿಕ ತಂತ್ರಜ್ಞಾನದ ಆ್ಯಪ್‌ನ್ನು ಪರಿಷತ್ತಿಗೆ ಅಳವಡಿಸಿಕೊಂಡಿರುವ, ವಿಶ್ವದ್ಯಾಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಂಡಿರುವ ಹಾಗೂ ಕನ್ನಡ ಶಾಲೆಗಳ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಸರ್ಕಾರ ನೀಡಿರುವ ರಾಜ್ಯ ಸಚಿವರ ದರ್ಜೆ ಸ್ಥಾನಮಾನದಿಂದಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡದ ಕೆಲಸಗಳನ್ನು ಮಾಡಲು ಶಕ್ತಿ ಬಂದಂತಾಗಿದೆ.
ಸರ್ಕಾರ ರಾಜ್ಯ ಸಚಿವರ ದರ್ಜೆ ಸ್ಥಾನಮಾನದ ಗೌರವ ನೀಡಿರುವುದು ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರಿಗೆ ಸಲ್ಲಿಸಿರುವ ಸನ್ಮಾನವಾಗಿದೆ. ಈ ಮೂಲಕ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸರ್ಕಾರ ಇಟ್ಟಿರುವ ಭರವಸೆ, ವಿಶ್ವಾಸವನ್ನು ಕಾಪಾಡಿಕೊಂಡು ಹೋಗುವ ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯುತವಾಗಿ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಕಟಿಬದ್ಧರಾಗಿ ಕೆಲಸ ಮಾಡಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕಾರ್ಯಾಲಯ ಕಾರ್ಯದರ್ಶಿ ಜಗದೀಶ್ ಕೂಲಂಬಿ ಅವರುಗಳು ಕರ್ನಾಟಕ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿ ನಾಡೋಜ ಡಾ.ಮಹೇಶ ಜೋಶಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.