Connect with us

Dvgsuddi Kannada | online news portal | Kannada news online

ದಾವಣಗೆರೆ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಲಿ : ಜಿಲ್ಲಾಧಿಕಾರಿ

ದಾವಣಗೆರೆ

ದಾವಣಗೆರೆ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಲಿ : ಜಿಲ್ಲಾಧಿಕಾರಿ

ದಾವಣಗೆರೆ: ಬಾಲ್ಯ ವಿವಾಹ ನಿಯಂತ್ರಣ ತಡೆ ಕಾಯ್ದೆ ಪ್ರಬಲವಾಗಿದ್ದು, ಕಾಯ್ದೆಯನ್ನು ಬಳಸಿಕೊಂಡು ಬಾಲ್ಯ ವಿವಾಹ ತಡೆಯುವ ಮೂಲಕ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುವವರಿಗೆ ತಕ್ಕ ಶಿಕ್ಷೆಯಾಗುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2022-23 ನೇ ಸಾಲಿನ ಮೊದಲ ತ್ರೈಮಾಸಿಕ ಸಭೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಾಲ್ಯ ವಿವಾಹದ ತಡೆಯುವ ಕುರಿತಂತೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳಾಗಬೇಕು. ವಿವಿಧ ಹಂತಗಳಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿ ಈ ಬಗೆಗೆ ಚರ್ಚೆಗಳಾಗಿ ಬಾಲ್ಯ ವಿವಾಹ ಮುಕ್ತ ಪಂಚಾಯಿತಿ ಘೋಷಣೆಗಳಾಗುವಂತೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜಿಸಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಪೋಷಕರು ಕಾಯ್ದೆಯ ಕುರಿತು ಮಾಹಿತಿ ಇದ್ದರೂ ಕೂಡ ಕಾನೂನು ಉಲ್ಲಂಘಿಸಿ ವಿವಾಹಗಳನ್ನು ನಡೆಸುತ್ತಿದ್ದಾರೆ. ಸಮಾಜದ ಕೆಳಸ್ಥರದ ಸಮುದಾಯಗಳಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರುತ್ತಿವೆ. ಹಾಗಾಗಿ ಈ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಾಗ ಅವುಗಳನ್ನು ಪತ್ರಿಕೆಗಳು ಹಾಗೂ ಮಾಧ್ಯಮದ ಮೂಲಕ ಹೆಚ್ಚು ಪ್ರಚಾರಗೊಳಿಸಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಸಮಾಜಕ್ಕೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಸಂದೇಶ ನೀಡಬೇಕು. ಅನೇಕ ಬಾರಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕುಟುಂಬಗಳು ರಾಜಿಯಾಗಿ ನ್ಯಾಯಾಲಯದಲ್ಲಿ ಸಾಕ್ಷಿ ಸಾಬೀತಾಗದೆ ಪ್ರಕರಣಗಳು ಬಿದ್ದು ಹೋಗಿರುವ ಘಟನೆಗಳನ್ನು ನಾವು ಕಾಣಬಹುದಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾಹಿತಿ ನೀಡಿ, ಈ ಸಾಲಿನಲ್ಲಿ 23 ಬಾಲ್ಯ ವಿವಾಹದ ದೂರುಗಳು ಬಂದಿದ್ದು ಅವುಗಳಲ್ಲಿ 19 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ, 4 ಮದುವೆಗಳು ನಡೆದಿದ್ದು, ಸಂಬಂಧಿಸಿದವರ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ. ದೂರುಗಳು ಬಂದಾಗ ಸಿಡಿಪಿಒ ಮಾತ್ರ ಸ್ಥಳಕ್ಕೆ ಹೋಗುವುದರಿಂದ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ ಹಾಗಾಗಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಹಕಾರ ನೀಡುವಂತೆ ಆದೇಶ ಹೊರಡಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕೇಂದ್ರದಲ್ಲಿ 2 ಸ್ವಾಧಾರ ಕೇಂದ್ರಗಳು ಕಾರ್ಯನಿರ್ವಹಿಸಿತಿದ್ದು 1 ಕೇಂದ್ರವನ್ನು ಮಾತ್ರ ಉಳಿಸಿಕೊಳ್ಳಲು ಕೇಂದ್ರ ಕಛೇರಿಯಿಂದ ಆದೇಶಿಸಿರುತ್ತಾರೆ ಅದರಂತೆ ಒಂದು ಕೇಂದ್ರವನ್ನು ತಾಲೋಕು ಹಂತಕ್ಕೆ ವರ್ಗಾಯಿಸಲು ಸೂಚನೆಯಿದೆ ಅದರಂತೆ ಒಂದು ಕೇಂದ್ರವನ್ನು ತಾಲೋಕು ಕೇಂದ್ರಕ್ಕೆ ವರ್ಗಾಯಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಎರಡೂ ಕೇಂದ್ರಗಳ ಮುಖ್ಯಸ್ಥರು ತಾಲೂಕು ಕೇಂದ್ರಕ್ಕೆ ಹೋಗಲು ಒಪ್ಪದಿದ್ದಾಗ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಎರಡೂ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ಹಾಗೆ ಹೇಳುವುದು ಕಷ್ಟವಾಗುತ್ತದೆ, ಈ ಬಗೆಗೆ ಇಲಾಖೆಯ ನಿರ್ದೇಶಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದೆಂದರು.
ಸ್ಪೂರ್ತಿ ಸಂಸ್ಥೆಯ ರೂಪ್ಲಾ ನಾಯಕ್ ಮಾತನಾಡಿ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ದೇವಸ್ಥಾನದ ಮುಂಭಾಗ ನಿರ್ಗತಿಕ ಮಹಿಳೆಯರು ಭಿಕ್ಷೆ ಬೇಡುತಿರುತ್ತಾರೆ, ಎಷ್ಟೋ ಮಹಿಳೆಯರಿಗೆ ಮೈಮೇಲೆ ಸರಿಯಾದ ಬಟ್ಟೆಯೂ ಇರುವುದಿಲ್ಲ, ಹಾಗಿದ್ದರೆ ಈ ಸ್ವಾಧಾರ ಕೆಂದ್ರಗಳು ಏನು ಮಾಡುತ್ತಿವೆ ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದರು ಹಾಗೂ ಶಾಲೆಗಳಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿ ಊಟ ಸೇವಿಸುವಾಗ ಶಿಕ್ಷಕರು ಬೇರೆಡೆ ಊಟ ಮಾಡದೆ ಮಕ್ಕಳ ಜೊತೆಯೇ ಊಟ ಮಾಡಲು ಸೂಚಿಸಬೇಕೆಂದರು.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಾತನಾಡಿ, ಸುಡಗಾಡು ಸಿದ್ದರು ಸೇರಿದಂತೆ ಹಲವು ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ, 6 ನೇ ತರಗತಿಯಿಂದ ಪಿಯುಸಿ ಕಲಿಯುತ್ತಿರುವ ಮಕ್ಕಳು ಬಹಳಷ್ಟಿದ್ದು ಅವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರೇಷ್ಮಾ ಕೌಸರ್ ಪ್ರತಿಕ್ರಿಯಿಸಿ, ಪರಿಶಿಷ್ಟ ವರ್ಗಕ್ಕೆ ಗುರಿ ನಿಗದಿ ಇಲ್ಲವಾದ್ದರಿಂದ ಪ್ರವೇಶ ನೀಡಲು ತೊಂದರೆಯಿಲ್ಲ, ವಿದ್ಯಾರ್ಥಿಗಳ ಪಟ್ಟಿ ನೀಡಿದರೆ ಹಾಸ್ಟಲ್ ಸೌಲಭ್ಯ ಕಲ್ಪಿಸಲಾಗುವುದೆಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಾಸಂತಿ ಉಪ್ಪಾರ್ ಮಾಹಿತಿ ನೀಡಿ, ರಾಷ್ಟ್ರೀಯ ಪೋಷಣ್ ಅಭಿಯಾನದಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸಖಿ ಒನ್ ಸ್ಟಾಪ್ ಸೆಂಟರ್‍ಗಳಲ್ಲಿ ಕೌಟುಂಬಿಕ ದೌರ್ಜನ್ಯ, ಆಸಿಡ್, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಆಶ್ರಯ ಕಲ್ಪಿಸುವ ಮೂಲಕ ವೃತ್ತಿಪರ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಡಿಹೆಚ್‍ಓ ನಾಗರಾಜ್, ಡಿಡಿಪಿಐ ತಿಪ್ಪೇಶಪ್ಪ, ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪಧಾಧಿಕಾರಿಗಳು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top