ದಾವಣಗೆರೆ: ಜಿಲ್ಲೆಯ ಬಾಡಾ ಕ್ರಾಸ್ ಬಳಿ ಮಂಗಳಮುಖಿಯರ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತ ಶಾಲಾ-ಕಾಲೇಜುಗಳು ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್‍ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಂದು ನಡೆದ ಸಾಂತ್ವನ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ತಡೆಗಟ್ಟುವ ಕಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು.
ರಾತ್ರಿಯ ಸಮಯದಲ್ಲಿ ಮಂಗಳಮುಖಿಯರ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ವಾಹನಗಳು ಸಮೀಪಿಸುತ್ತಿದ್ದಂತೆ ತಪ್ಪಿಸಿಕೊಳ್ಳುತ್ತಾರೆ. ತದನಂತರ ಇದೇ ಸಮಸ್ಯೆ ಇರುತ್ತದೆ. ಬೀದಿ ದೀಪ ಅಳವಡಿಸಿದರೆ ಅದನ್ನು ಹೊಡೆದು ಹಾಕುತ್ತಾರೆ. ಬೆಂಗಳೂರಿನಿಂದ ಬಂದವರು ಹೆಚ್ಚಿರುವುದರಿಂದ ಮಾತು ಕೇಳುತ್ತಿಲ್ಲ. ಈ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.
ಇನ್ನು ಜಿಲ್ಲೆಯಲ್ಲಿ ಅಲೆಮಾರಿ ಜನರು ಹೆಚ್ಚಾಗಿದ್ದು, ಕೆಲವರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಅವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು. ಹಾಗೂ ಕೋವಿಡ್ ಪರಿಣಾಮದಿಂದ ಶಾಲೆಗಳಿಲ್ಲದೇ ಯಾರು ಭಿಕ್ಷಾಟನೆ ಮಾಡುತ್ತಿದ್ದಾರೆ, ಯಾರು ಬಾಲ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ಇರಲಿಲ್ಲ. ಆದರೂ ಇಂತಹ ಪ್ರಕರಣಗಳಲ್ಲಿ ಸಿಕ್ಕ ಮಕ್ಕಳ ಪೈಕಿ ಗಂಡು ಮಕ್ಕಳನ್ನು ತುರ್ಚಘಟ್ಟದ ಪುನರ್ವಸತಿ ಕೇಂದ್ರಕ್ಕೆ, ಹೆಣ್ಣು ಮಕ್ಕಳನ್ನು ಚಿತ್ರದುರ್ಗದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. 6 ವರ್ಷದ ಒಳಗಿನ ಅಲೆಮಾರಿ ಮಕ್ಕಳಿಗೆ ಫುಡ್ ಕಿಟ್ ನೀಡಿ, ಅವರನ್ನು ದಾಖಲಾಗಿಸಲಾಗುತ್ತಿದೆ ಎಂದರು.
ಸಿಇಓ ವಿಜಯ ಮಹಾಂತೇಶ್ ಮಾತನಾಡಿ, ಸರ್ಕಲ್‍ಗಳಲ್ಲಿ ಭಿಕ್ಷಾಟನೆ ಬಗ್ಗೆ ಮಾಹಿತಿ ಕಲೆಹಾಕಿ. ನಗರದ ಪ್ರಮುಖ ಸರ್ಕಲ್‍ಗಳಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಹಲವಾರು ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿರುವುದು ಸರ್ವೇ ಸಾಮಾನ್ಯವಾಗಿದ್ದು, ಆ ಪುಟ್ಟ ಮಕ್ಕಳ ನೈಜ್ಯ ಪೋಷಕರು ಅವರುಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಹಾಗೂ ಮಕ್ಕಳ ವಿಷಯದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಈ ಮಾಹಿತಿ ಕಲೆ ಹಾಕಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಕೃಷಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಕೊಟ್ರೇಶ್.ಟಿ.ಎಂ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಸಿಡಿಪಿಓ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.



