ದಾವಣಗೆರೆ: ರಸಗೊಬ್ಬರ, ಕೀಟ ನಾಶಕ ಬೆಲೆ, ಭತ್ತ ಕಟಾವು ಯಂತ್ರಗಳ ಬಾಡಿಗೆ ಹೆಚ್ಚಳದಿಂದ ರೈತ ಸಮುದಾಯ ಸಂಕಷ್ಟಕ್ಕೆ ಒಳಗಾಗಿದ್ದು, ಸರಕಾರ ಕೂಡಲೇ ಪ್ರತಿ ಕ್ವಿಂಟಲ್ ಭತ್ತಕ್ಕೆ 3 ಸಾವಿರ ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಹಾಳೂರು ನಾಗರಾಜಪ್ಪ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಎಲ್ಲ ದರಗಳು ಹೆಚ್ಚಳವಾಗಿದ್ದು, ರೈತ ಬೆಳೆದ ಬೆಳೆಗಳ ದರ ಮಾತ್ರ ಏರಿಕೆಯಾಗುತ್ತಿಲ್ಲ. ಅದರಲ್ಲೂ ಭತ್ತಕ್ಕೆ ನ್ಯಾಯಯುತ ಬೆಲೆ ಸಿಗದೆ ಬೆಳೆಗಾರರು ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ. ಡೀಸೆಲ್ ಬೆಲೆ 100 ರೂ. ತಲುಪಿದ್ದು, ಭತ್ತ ಕಟವು ಯಂತ್ರಗಳ ಬಾಡಿಗೆ ಸಹ ಹೆಚ್ಚಾಗಿದೆ. ಆದರೆ ಖರೀದಿ ಕೇಂದ್ರ ತೆರೆಯುವುದಾಗಿ ಹೇಳುವ ಸರಕಾರ ಆ ಕೆಲಸವನ್ನು ಮಾಡುವುದಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಸ್ವಾಮಿ ಮಾತನಾಡಿ, ಭತ್ತ ಬೆಳೆಗಾರರ ಅನುಕೂಲಕ್ಕಾಗಿ ರಾಜ್ಯ ಸರಕಾರ ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಗರಿಷ್ಠ ಮಿತಿ ನಿಗದಿ ಮಾಡದೆ, ರೈತರಿಂದ ಜಮೀನಿಗೆ ಸಂಬಂಧಿಸಿದ ಪಹಣಿ ಪಡೆದು ಅವರು ಬೆಳೆದಿರುವ ಪೂರ್ಣ ಪ್ರಮಾಣ ಬೆಳೆ ಖರೀದಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆರ್. ಚಿದಾನಂದಪ್ಪ, ಬಿ.ಎಚ್. ಯೋಗೇಶ್, ಎ. ಉಮಾಪತಿ, ಭಾನುವಳ್ಳಿ ಪರಮೇಶ್ವರಪ್ಪ ಇದ್ದರು.



