ದಾವಣಗೆರೆ: ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಮೇ 7 ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಕೃಷ್ಣಾಭವಾನಿ ಕಲ್ಯಾಣ ಮಂದಿರದಲ್ಲಿ ಕ್ಷತ್ರೀಯ ಮರಾಠ ಸಮಾಜದ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಗವಿಪುರಂನ ಗೋಸಾಯಿ ಮಹಾಸಂಸ್ಥಾನದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಶ್ರೀಗಳು ಪ್ರಥಮಬಾರಿಗೆ ದಾವಣಗೆರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9ಕ್ಕೆ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ನಂತರ ನಗರದೇವತೆ ದುರ್ಗಾಬಿಕಾ ದೇವಿ ದೇವಸ್ಥಾನದಿಂದ ಶ್ರೀಗಳನ್ನು ಬೆಳ್ಳಿ ರಥದ ಮೂಲಕ ಪೂರ್ಣಕುಂಭ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯು ಹೊಂಡದ ವೃತ್ತ, ಜಾಲಿನಗರದ ಮೂಲಕ ಸಾಗಲಿದೆ ಎಂದರು.\
ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ 12ಕ್ಕೆ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಸಂಘದ ಅಧ್ಯಕ್ಷ ಡಿ.ಮಾಲತೇಶ್ ರಾವ್ ಜಾಧವ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕ್ಷತ್ರೀಯ ಮರಾಠ ಸಮಾಜದ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಹಾವೇರಿ ಶಾಸಕರಾದ ಶ್ರೀನಿವಾಸ್ ಮಾನೆ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಎಂ.ಜಿ ಮೂಳೆ, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ವೈ ರಾಕೇಶ್ ಜಾಧವ್, ಪಾಲಿಕೆ ಸದಸ್ಯ ಹೆಚ್.ಎಸ್ ಗಣೇಶ್ ರಾವ್ ಪವಾರ್,ದೂಡಾ ನಾಮನಿರ್ದೇಶಿತ ಸದಸ್ಯ ಟಿ.ಮಾರುತಿರಾವ್ ಘಾಟ್ಗೆ,ದಿಶಾ ಕಮಿಟಿ ಸದಸ್ಯ ಭಾಗ್ಯ ಪಿಸಾಳೆ,ದಗಡೋಜಿರಾವ್ ಸಾಳಂಕಿ,ವಿಕಾಸ್ ದೇವಕರ್ ಅವರುಗಳಿಗೆ ಸನ್ಮಾನ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಲತೇಶ್ ಡಿ.ಜಾಧವ್, ಜಯಣ್ಣ ಜಾಧವ್, ಯಲ್ಲಪ್ಪ ಢಮಾಳೆ, ಗಣೇಶ್ ರಾವ್, ಬಸವರಾಜ್ ಮಾನೆ, ಪ್ರವೀಣ್, ಶಿವರಾಜ್ ಮತ್ತಿತರರಿದ್ದರು.



