Connect with us

Dvgsuddi Kannada | online news portal | Kannada news online

ದಾವಣಗೆರೆ: 24.61 ಕೋಟಿ ವೆಚ್ಚದ ಸಿಆರ್ ಸಿ ಕೇಂದ್ರಕ್ಕೆ ಶಂಕುಸ್ಥಾಪನೆ; ದಿವ್ಯಾಂಗರ ಏಳಿಗೆಗೆ ಶ್ರಮಿಸೋಣ: ಸಚಿವ ಎ. ನಾರಾಯಣ ಸ್ವಾಮಿ

ದಾವಣಗೆರೆ

ದಾವಣಗೆರೆ: 24.61 ಕೋಟಿ ವೆಚ್ಚದ ಸಿಆರ್ ಸಿ ಕೇಂದ್ರಕ್ಕೆ ಶಂಕುಸ್ಥಾಪನೆ; ದಿವ್ಯಾಂಗರ ಏಳಿಗೆಗೆ ಶ್ರಮಿಸೋಣ: ಸಚಿವ ಎ. ನಾರಾಯಣ ಸ್ವಾಮಿ

ದಾವಣಗೆರೆ: ಅಂಗವಿಕಲರ ಹಾಗೂ ದಿವ್ಯಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ ಆದರೆ ಅನೇಕರಿಗೆ ಅವುಗಳ ಬಗ್ಗೆ ಮಾಹಿತಿ ಇಲ್ಲ ಈ ಬಗ್ಗೆ ಹೆಚ್ಚು ಪ್ರಚಾರ ನೀಡುವ ಮೂಲಕ ವಿಕಲಚೇತನ ಹಾಗೂ ದಿವ್ಯಾಂಗರ ಏಳಿಗೆಗೆ ಶ್ರಮಿಸೋಣ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಹೇಳಿದರು.

ಶನಿವಾರ ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿ ಬಳಿ ಬೌದ್ಧಿಕ ದಿವ್ಯಾಂಗ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ನೂತನವಾಗಿ ನಿರ್ಮಿಸಲಾಗುತ್ತಿರುವ 24.16 ಕೋಟಿ ವೆಚ್ಚದ ಸಂಯುಕ್ತ ಪ್ರಾದೇಶಿಕ ಕೇಂದ್ರದ ಕಟ್ಟಡದ (ಸಿಆರ್‍ಸಿ) ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಯಾವ ಮನೆಯಲ್ಲಿ ವಿಕಲಚೇತನರು ಹಾಗೂ ದಿವ್ಯಾಂಗರು ಜನಿಸಿರುತ್ತಾರೋ ಅಂತಹ ಮನೆಗಳಲ್ಲಿ ಪೋಷಕರು ಆ ಮಕ್ಕಳ ಪೋಷಣೆಗೆ ಜೀವನವನ್ನು ಮೀಸಲಿಟ್ಟಿರುತ್ತಾರೆ. ಚಿಕ್ಕ ಪುಟ್ಟ ತೊಂದರೆಗಳಿಗೆ ಆಸ್ಪತ್ರೆಗೆ ಹೋಗಲಾಗುವುದಿಲ್ಲ. ಹಾಗಾಗಿ ದಿವ್ಯಾಂಗರಿಗೆ ಪೋಷಕರೇ ವೈದ್ಯರ ರೀತಿ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಅವರುಗಳ ಪೋಷಕರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಕೆಲವೊಮ್ಮೆ ಇಂತಹ ಮಕ್ಕಳನ್ನು ಪೋಷಕರು ಸಂಭಾಳಿಸಲಾಗದೆ ಅವರನ್ನು ಕೂಡಿ ಹಾಕುವಂತಹ ಪ್ರಕರಣಗಳು ಕಂಡುಬರುತ್ತವೆ. ಆದರೆ ಆ ರೀತಿ ಮಕ್ಕಳನ್ನು ಕೂಡಿ ಹಾಕುವುದು ತಪ್ಪಾಗುತ್ತದೆ, ಸಂಯುಕ್ತ ಪ್ರಾದೇಶಿಕ ಕೇಂದ್ರದ ಮೂಲಕ ಪೋಷಕರಿಗೂ ತರಬೇತಿ ನೀಡಿ ಪೋಷಕರನ್ನು ಒಂದು ರೀತಿ ತರಬೇತಿದಾರರನ್ನಾಗಿ ಹಾಗೂ ವೈದ್ಯರನ್ನಾಗಿಸುವ ಮೂಲಕ ದಿವ್ಯಾಂಗರಿಗೆ ನೆರವು ನೀಡಲಾಗುತ್ತದೆ ಎಂದರು.

ಗೋವಾ, ಕರ್ನಾಟಕ ರಾಜ್ಯಗಳನ್ನೊಳಗೊಂಡತೆ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಎರಡೂ ರಾಜ್ಯಗಳ ದಿವ್ಯಾಂಗರು ಈ ಕೇಂದ್ರದಲ್ಲಿ ಚಿಕಿತ್ಸೆ ಹಾಗೂ ತರಬೇತಿ ಪಡೆಯುವುದರಿಂದ ದೂರದಿಂದ ಬಂದು ಉಳಿದುಕೊಳ್ಳುವವರಿಗೆ ಎಲ್ಲಾ ರೀತಿಯ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಪ್ರಾದೇಶಿಕ ಸಂಯುಕ್ತ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಇದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಜನಪ್ರತಿನಿಧಿಗಳು ಬದ್ಧವಾಗಿರಬೇಕು. ಶೀಘ್ರದಲ್ಲೇ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು, ಅದರಿಂದ ಸಮೀಪದಲ್ಲಿ ರೈಲು ನಿಲುಗಡೆ ಕೇಂದ್ರ ಆದರೆ ಈ ಕೇಂದ್ರಕ್ಕೆ ಮಕ್ಕಳನ್ನು ಕರೆತರುವವರಿಗೆ ಅನುಕೂಲವಾಗಲಿದೆ ಎಂದರು.

ಸಂಸದ ಡಾ.ಜಿ.ಎಂ ಸಿದ್ದೇಶ್ವರ್ ಮಾತನಾಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಯ ಆಧಾರದ ಮೇಲೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವುದು ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಸರ್ಕಾರ ಇಂತಹವರನ್ನು ಮುಖ್ಯವಾಹಿನಿಗೆ ತರಲು ಹಲವಾರು ಯೋಜನೆಗಳನ್ನು ರೂಪಿಸಿದೆ ಅಂತಹ ಯೋಜನೆಗಳ ಸೌಲಭ್ಯ ಇವರಿಗೆ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ. ದಿವ್ಯಾಂಗ ಮಕ್ಕಳು ದೇವರ ಮಕ್ಕಳು ಇದ್ದಂತೆ ಆದ್ದರಿಂದ ಅವರಿಗೆ ವಿವಿಧ ಸೌಲಭ್ಯ ಹಾಗೂ ಪೋಷಕರಿಗೆ ತರಬೇತಿ ನೀಡಿ ಅವರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಸಿಆರ್‍ಸಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ವಿಕಲಚೇತನ ವ್ಯಕ್ತಿಗಳ ಕಲ್ಯಾಣಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ತರಬೇತಿ ಕೇಂದ್ರದ ಮೂಲಕ ವಿಕಲಚೇತನರಿಗೆ ಅನೇಕ ರೀತಿಯ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು, 24.61 ಕೋಟಿ ರೂ ವೆಚ್ಚದಲ್ಲಿ 7 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಿಆರ್‍ಸಿ ಕೇಂದ್ರದ ಸದುಪಯೋಗ ಅಗತ್ಯವಿರುವ ಎಲ್ಲರಿಗೂ ಸಿಗಲಿ, 2017 ರಲ್ಲಿ ಮಂಜೂರಾದ ಕೇಂದ್ರವು ಕ್ಲಿನಿಕಲ್ ಸೇವೆಗಳನ್ನು ಒದಗಿಸುತ್ತಿತ್ತು ಇನ್ನು ಮುಂದೆ ತರಬೇತಿ, ಕೌಶಲಾಭಿವೃದ್ದಿಯಂತಹ ಚಟುವಟಿಕೆಗಳಿಗೂ ನೆರವಾಗಲಿದೆ ಹಾಗೂ ದಿವ್ಯಾಂಗ ವ್ಯಕ್ತಿಗಳ ಸೇವೆ ಮಾಡುವ ಮೂಲಕ ದೇಶಕ್ಕೆ ಮಾದರಿ ಕೇಂದ್ರವನ್ನಾಗಿ ಮಾಡಲು ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ 492 ಅರ್ಹ ಫಲಾನುಭವಿಗಳಿಗೆ 41 ಲಕ್ಷ ವೆಚ್ಚದ ವಿವಿಧ ಭೋಧನ ಕಲಿಕಾ ಸಾಮಗ್ರಿಗಳನ್ನು ಹಾಗೂ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ.ರವೀಂದ್ರನಾಥ್, ಸಿ.ಆರ್.ಸಿ ಕೇಂದ್ರದ ಜಂಟಿ ಕಾರ್ಯದರ್ಶಿ ರಾಜೀವ್ ಶರ್ಮಾ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಎ.ಚನ್ನಪ್ಪ, ಸಿಆರ್‍ಸಿ ಕೇಂದ್ರದ ನಿರ್ದೇಶಕ ಡಾ ಉಮಾಶಂಕರ್ ಮೊಹಂತಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್, ಗ್ರಾ.ಪಂ ಸದಸ್ಯರುಗಳು ಹಾಗೂ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಸಿಆರ್ ಸಿ ಕೇಂದ್ರದಲ್ಲಿ ದೊರೆಯುವ ಸೌಲಭ್ಯ : ದಾವಣಗೆರೆಯ ಸಿಆರ್‍ಸಿ ಕೇಂದ್ರದಲ್ಲಿ ಆರಂಭಿಕ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ, ಔದ್ಯೋಗಿಕ ಚಿಕಿತ್ಸೆ, ಭೌತಿಕ ಚಿಕಿತ್ಸೆ, ದೈಹಿಕ ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ, ಮಾನಸಿಕ ಮಧ್ಯಸ್ಥಿಕೆ, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್, ಮಾತನಾಡುವ ಭಾಷೆ ಮತ್ತು ಶ್ರವಣ, ವಿಶೇಷ ಶಿಕ್ಷಣ, ಕೌಶಲ್ಯ ತರಬೇತಿ, ವೃತ್ತಿಪರ ತರಬೇತಿ, ಸಹಾಯಕ ಸಾಧನಗಳ ವಿತರಣೆ, ಬೋಧನೆ ಕಲಿಕೆ ಮತ್ತು ಸಂವಹನ ಸಾಮಗ್ರಿಗಳು, ಸಮಾಜ ಕಾರ್ಯ, ಉದ್ಯೋಗ, ಔಟ್‍ರೀಚ್ ಸೇವೆಗಳು, ಮಾನವ ಸಂಪನ್ಮೂಲ ಅಭಿವೃದ್ದಿ, ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಅಸಾಮಥ್ರ್ಯ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಅಂಗಗಳು, ಬೋಧನೆ ಮತ್ತು ಕಲಿಕಾ ಸಾಮಗ್ರಿ ಕಿಟ್‍ಗಳು, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಶ್ರವಣ ಸಾಧನಗಳು ಸೇರಿದಂತೆ ದೈಹಿಕ ಅಂಗವೈಕಲ್ಯ ಸಹಾಯಕ ಸಾಧನಗಳ ನಿಯಮಿತ ವಿತರಣೆ ಕೇಂದ್ರದಿಂದ ನಡೆಯಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top