ದಾವಣಗೆರೆ: ಹರಿಹರ ಪಂಚಮಸಾಲಿ ಮಠದಲ್ಲಿ ಏಪ್ರಿಲ್ 23, 24 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಉದ್ಯಮಿಯಾಗು ಉದ್ಯೋಗ ನೀಡು, ಕೌಶಲ್ಯ ಕೃಷಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಹರಿಹರದ ಪಂಚಮಸಾಲಿ ಮಠ ಪೀಠಾಧಿಪತಿ ಶ್ರೀ ವಚನಾಂದ ಸ್ವಾಮೀಜಿ ಮಾಹಿತಿ ನೀಡಿದ್ದು, ಕಾರ್ಯಕ್ರಮದಲ್ಲಿ ಹಲವು ರಾಷ್ಟ್ರೀಯ ಕಂಪನಿಗಳು ಭಾಗವಹಿಸಲಿದ್ದು, ಯುವಕರಿಗೆ ಉದ್ಯೋಗ ನೀಡಲಿವೆ ಎಂದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ನಡೆದಿದ್ದು, ಎರಡು ವಾರಕ್ಕೊಮ್ಮೆ ನಾವು ರಾಜ್ಯ-ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಂಪರ್ಕದಲ್ಲಿದ್ದೇವೆ. ಕೋವಿಡ್‌ನಿಂದ ಮೀಸಲಾತಿಯ ಬಗ್ಗೆ ಸಮೀಕ್ಷೆ ನಡೆದಿರಲಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮೀಸಲಾತಿ ಸಮೀಕ್ಷೆ ಮುಂದುವರಿಸಿದ್ದಾರೆ ಎಂದರು.
2009ರಲ್ಲಿ ಪಂಚಮಸಾಲಿ ಸಮುದಾಯವನ್ನು 3ಬಿಯಲ್ಲಿ ಸೇರಿಸಿದ್ದೇ ಬಿ.ಎಸ್.ಯಡಿಯೂರಪ್ಪ. ಅಧಿಕೃತವಾಗಿ ಪಂಚಮಸಾಲಿ ಸಮುದಾಯವನ್ನು ಮೊಟ್ಟಮೊದಲ ಬಾರಿಗೆ ಗೆಜೆಟ್‌ನಲ್ಲಿ ಸೇರಿಸಿದು ಹರಿಹರ ಪಂಚಮಸಾಲಿ ಮಠ ಎಂದರು.

 
		 
		 
		 
		 
		 
			
 
                                
                             
