ದಾವಣಗೆರೆ: ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಸ್ಥೆಗಳು ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ಪ್ರಕಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸರಿಯಾದ ಗುಣಮಟ್ಟದ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಪರವಾನಗಿ (ಲೈಸೆನ್ಸ್) ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಸೂಚನೆ ನೀಡಲಾಗಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಮತ್ತು ಕೈಗಾರಿಕಾ ಇಲಾಖೆಯಿಂದ ಪರವಾನಗಿ ಪಡೆದಿದ್ದರೂ ಕೂಡಾ ಸರ್ಕಾರದ ಆಜ್ಞೆಯ ಪ್ರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 01 ವರ್ಷಕ್ಕೆ ಕಡ್ಡಾಯವಾಗಿ ಪರವಾನಗಿ (ಲೈಸೆನ್ಸ್) ಪಡೆಯಬೇಕು. ಈ ರೀತಿ ಪಡೆದ ಪರವಾನಗಿಯು ಪ್ರತಿ ವರ್ಷ ಡಿಸೆಂಬರ್ 31 ಕ್ಕೆ ಮುಕ್ತಾವಾಗಲಿದ್ದು, ನವೀಕರಣವನ್ನು ಜನವರಿ.01 ರಿಂದ ಪುನಃ ಪಡೆಯಬೇಕಿರುತ್ತದೆ.
ಪ್ರಸ್ತುತ 2022 ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ಆನ್‍ಲೈನ್ ಮೂಲಕ ನೂತನ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧುವಿನ ಜಾಲತಾಣದಲ್ಲಿ ಚಾಲನೆಗೊಂಡಿದೆ. ಹೀಗಾಗಿ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು sevasindhuservices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪ್ರತಿ ವರ್ಷ ಪರವಾನಗಿ ಪಡೆಯಬೇಕು.
ಪರವಾನಿಗೆ ಪಡೆಯದೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದನೆ ಅಥವಾ ಮಾರಾಟ ಮಾಡಿದಲ್ಲಿ, ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8.9(1) ಹಾಗೂ 11(1)(ಸಿ) ಪ್ರಕಾರ ಕ್ರಮ ಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಚಿಕಿತ್ಸಾಲಯ/ಪಶು ಆಸ್ಪತ್ರೆಯ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪರವಾನಗಿ ಪ್ರಾಧಿಕಾರ ಹಾಗೂ ಉಪ ನಿರ್ದೇಶಕರು (ಪಾಲಿಕ್ಲಿನಿಕ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



