ದಾವಣಗೆರೆ: ಹಿಂದೂ ಲಿಂಗಾಯತರಾಗಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಮಕ್ಕಳಿಗೆ ಬೇಡ ಜಂಗಮ ಪ್ರಮಾಣ ಪತ್ರ ಕೊಡಿಸಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ರೇಣುಕಾಚಾರ್ಯ ಮಕ್ಕಳು ಹಾಗೂ ಸಹೋದರ ಎಂ.ಪಿ. ದಾರಕೇಶ್ವರಯ್ಯ ಮತ್ತ ಅವರ ಮಕ್ಕಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ 1989ರ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಇವರಿಗೆ ನೀಡಿರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರೇಣುಕಾಚಾರ್ಯ ಅವರ ಮಗಳು ಚೇತನಾ ಮತ್ತು ಸಹೋದರ ಡಾ.ಎಂ.ಪಿ. ದಾರಕೇಶ್ವರಯ್ಯ ಮತ್ತಿವರ ಮಗಳು ಶೃತಿ ಅವರ ಶಾಲಾ ದಾಖಲಾತಿಗಳಲ್ಲಿ ಹಿಂದೂ ಲಿಂಗಾಯತ ಎಂಬುವುದಾಗಿ ನಮೂದಾಗಿದೆ. ರೇಣುಕಾಚಾರ್ಯ ಅವರು ತಮ್ಮ ರಾಜಕೀಯ ಪ್ರಭಾವ ಬಳಿಸಿ ಬೆಂಗಳೂರು ಉತ್ತರದ ತಹಶೀಲ್ದಾರ್ ಕಚೇರಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಅಕ್ರಮವಾಗಿ ಕೊಡಿಸಿದ್ದಾರೆ. ಸರ್ಕಾರದ ಸೌಲಭ್ಯ ಪಡೆದು ತಮ್ಮ ಮಕ್ಕಳನ್ನು ರಾಜ್ಯ ಹಾಗೂ ವಿದೇಶಗಳಲ್ಲಿ ಓದಿಸುತ್ತಿರುವುದು ಖಂಡನೀಯ ಎಂದರು.
ಸಂವಿಧಾನಕ್ಕೆ ಬದ್ಧವಾಗಿ ಅಧಿಕಾರ ನಡೆಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಪರಿಶಿಷ್ಟ ಜಾತಿಗೆ ಸಿಗುವ ಸೌಲಭ್ಯವನ್ನು ಕಬಳಿಸಿದ್ದಾರೆ. ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಕೊಡಿಸಿರುವುದು ಕಾನೂನು ಬಾಹಿರ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಬೇಡ ಜಂಗಮರು ಸಾಮಾನ್ಯವಾಗಿ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಬೀದರ್, ಗುಲ್ಬರ್ಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬರುತ್ತಾರೆ. ಇವರ ಮಾತೃಭಾಷೆ ತೆಲಗು ಆದರೂ ಕನ್ನಡ ಬಲ್ಲವರಾಗಿದ್ದಾರೆ. ಬೇಡಿ ಜಂಗಮರು ಮಾಂಸಾಹಾರಿಗಳು ಇವರು ಹಂದಿ ಮಾಂಸ ಸೇರಿದಂತೆ ಎಲ್ಲ ರೀತಿ ಮಾಂಸ ಸೇವನೆ ಮಾಡುತ್ತಾರೆ. ಮದ್ಯಪಾನ ಸೇವಿಸುತ್ತಾರೆ. ಭಿಕ್ಷೆ ಬೇಡುವುದು, ಕಣಿ ಹೇಳುವುದು, ಚಾಪೆ ನೇಯುವುದು ಇವರ ಕುಲಕಸುಬು ಆಗಿದೆ ಎಂದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಂಘಟನ ಸಂಚಾಲಕ ಬಿ.ಎನ್. ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್, ವೆಂಕಟೇಶ್ ಮಂಡ್ಯ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕುಂದೂವಾಡ, ಪದಾಧಿಕಾರಿ ಅಕ್ಷತ, ವಿಜಯಮ್ಮ, ಹಾಲೇಶ್ ಮತ್ತಿತರರಿದ್ದರು.