ದಾವಣಗೆರೆ: ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಜಿಲ್ಲೆಯಲ್ಲಿಂದು (ಮಾ. 12) ಚಾಲನೆ ಸಿಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಚಾಲನೆ ನೀಡಲಿದ್ದಾರೆ. ಉಳಿದಂತೆ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಶಾಸಕರು ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಹಾತ್ವಕಾಂಕ್ಷೆ ಯೋಜನೆ ಇದಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರ ಕನಸಾಗಿದೆ. ಕಂದಾಯ ದಾಖಲೆಗಳನ್ನು ಸಂಬಂಧಿಸಿದ ಎಲ್ಲರ ಮನೆಗಳಿಗೆ ತಲುಪಿಸುವುದು ಯೋಜನೆಯ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಮಹತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುವ ಮೂಲ ದಾಖಲೆಗಳಾದ ಪಹಣಿ, ಆದಾಯ/ಜಾತಿ ಪ್ರಮಾಣ ಪತ್ರ ಮತ್ತು ಅಟ್ಲಾಸ್‍ಗಳನ್ನು ರೈತರ ಮನೆ ಬಾಗಿಲೆಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯಡಿ ಜಿಲ್ಲೆಯ 1.35 ಲಕ್ಷ ರೈತ ಕುಟುಂಬಗಳನ್ನು ಗುರುತಿಸಲಾಗಿದೆ. ಈ ರೈತ ಕುಟುಂಬಗಳಿಗೆ ಅವರಿಗೆ ಕಂದಾಯ ದಾಖಲೆಗಳನ್ನು ನೀಡಲಾಗುವುದು. ಒಟ್ಟಾರೆ 2.93 ಲಕ್ಷ ಪಹಣಿ, 3.23 ಲಕ್ಷ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, 93 ಸಾವಿರ ಅಟ್ಲಾಸ್ ಸೇರಿದಂತೆ 7.10 ಲಕ್ಷ ದಾಖಲೆಗಳನ್ನು ವಿತರಿಸಾಲಗುವುದು ಎಂದರು.
ಇಂದು ಪತ್ರಗಳನ್ನು ಪಡೆಯಲು ಸಾಧ್ಯವಾಗದಿದ್ದವರು, ಮಾ.21ರಿಂದ 26ರ ನಡುವಿನ ವಾರದಲ್ಲಿ ನಾಡಕಚೇರಿಯಲ್ಲಿ ಉಚಿತವಾಗಿ ಪತ್ರಗಳನ್ನು ಪಡೆಯಬಹುದು. ತಹಶೀಲ್ದಾರರು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕ ಸಿಬ್ಬಂದಿಗಳ ಮೂಲಕ ದಾಖಲೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.



