ದಾವಣಗೆರೆ: ದಾವಣಗೆರೆ ಹೊರ ವಲಯದ ಆವರಗೆರೆ ಸಮೀಪ ಅಕ್ರಮವಾಗಿ ಹಾಕಿಕೊಂಡಿದ್ದ 400ಕ್ಕೂ ಹೆಚ್ಚು ಗುಡಿಸಲುಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶಿಲ್ದಾರ ಗೀರೀಶ್, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಗುಡಿಸಲು ತೆರವುಗೊಳಿಸಲಾಗಿದೆ.
ಅನೇಕ ಸಲ ಎಚ್ಚರಿಕೆ ನೀಡಿದ್ದರೂ ನಿವಾಸಿಗಳು ಗುಡಿಸಲುಗಳನ್ನು ತೆರವುಗೊಳಿಸಿರಲಿಲ್ಲ. ಹೀಗಾಗಿ ಪೊಲೀಸ್ ಭದ್ರತೆಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ. ಗುಡಿಸಲು ತೆರವಿನ ವೇಳೆ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏಕಾಏಕಿ ರಾತ್ರಿ ವೇಳೆ ಗುಡಿಸಲು ನೆಲ ಸಮ ಮಾಡಿದ್ದಾರೆ. ಕಷ್ಟಪಟ್ಟು ಗುಡಿಸಲು ಕಟ್ಟಿಕೊಂಡಿದ್ದೇವು. ಈಗ ನಮಗೆ ಮನೆ ಇಲ್ಲ, ಎಲ್ಲಿ ಹೋಗಬೇಕೆಂದು ತೋಚದಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.