Connect with us

Dvgsuddi Kannada | online news portal | Kannada news online

ದಾವಣಗೆರೆ: 2024ರೊಳಗೆ ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ನೀರು; ಜಿ.ಪಂ ಸಿಇಓ

ಪ್ರಮುಖ ಸುದ್ದಿ

ದಾವಣಗೆರೆ: 2024ರೊಳಗೆ ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆಗೂ ನೀರು; ಜಿ.ಪಂ ಸಿಇಓ

ದಾವಣಗೆರೆ: ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಕಾಮಗಾರಿಗಳು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಸಾಗಿದ್ದು, 2024 ರೊಳಗೆ ಜಿಲ್ಲೆಯ ಎಲ್ಲಾ ಕಂದಾಯ ಮತ್ತು ಜನವಸತಿ ಗ್ರಾಮಗಳ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.

ಜಲ ಜೀವನ್ ಮಿಷನ್ ಕುರಿತು ಗ್ರಾಮ ಪಂಚಾಯಿತಿ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿಗೆ ನೀರು ಅತೀ ಮುಖ್ಯವಾದದ್ದು. ಇಡೀ ಬ್ರಹ್ಮಾಂಡವು ಪಂಚಭೂತಗಳಿಂದ ಸೃಷ್ಠಿಯಾಗಿದೆ ಇವುಗಳಲ್ಲಿ ನೀರು ಸಹ ಒಂದು, ನೀರಿಲ್ಲದೇ ಬದುಕಲು ಅಸಾಧ್ಯ. ವೈಜ್ಞಾನಿಕವಾಗಿ ಜೀವ ಹುಟ್ಟಿದ್ದು ನೀರಿನಿಂದಲೇ ಇತಿಹಾಸದಲ್ಲಿ ಹಲವಾರು ನಾಗರೀಕತೆಗಳು ಕೂಡ ನದಿಯ ದಂಡೆಯ ಮೇಲೆ ಹುಟ್ಟಿಕೊಂಡಿವೆ. ಜೀವಸಂಕುಲಗಳ ಬದುಕಿಗೆ ಪೆÇೀಷಕಾಂಶಗಳಂತೆ ನೀರು ಅತಿಮುಖ್ಯ. ನೀರು ಸಂತೋಷ, ಶಕ್ತಿ, ಆರೋಗ್ಯ ಮತ್ತು ಧರ್ಮಶ್ರದ್ಧೆಯ ಮೂಲ, ತಾಯಿಯಂತೆ ಇದರ ಕಾಳಜಿವಹಿಸುವುದು ಅವಶ್ಯಕವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬವಣೆ ಹೆಚ್ಚುತ್ತಿದೆ. ಹಿಂದಿನ ಕಾಲದಲ್ಲಿ ಪ್ರತಿ ಊರಲ್ಲೂ ಕೆರೆ ಬಾವಿ ಕಲ್ಯಾಣಿಗಳಲ್ಲಿ ನೀರು ಹೊರ ತೆಗೆಯಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಅವುಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಸಾಕಷ್ಟು ಬದಲಾವಣೆಯಾಗಿದೆ ರಾಜಸ್ಥಾನ ಬಿಟ್ಟರೆ ಕರ್ನಾಟಕವೇ ಅತೀ ಹೆಚ್ಚು ಬರಕ್ಕೆ ತುತ್ತಾಗಿದ್ದನ್ನು ನಾವು ಕಾಣಬಹುದು. ಮನುಷ್ಯನ ದೇಹದಲ್ಲಿ ಶೇ 70ರಷ್ಟು ನೀರಿದೆ, ಹಾಗೆಯೇ ಭೂಮಿಯ ಮೇಲೂ ಕೂಡ ನೀರಿನ ಪ್ರಮಾಣ ಹೆಚ್ಚಿದೆ. ಆದರೆ ಇದರಲ್ಲಿ ನವೀಕರಿಸಬಹುದಾದ ನೀರಿನ ಪ್ರಮಾಣ ಶೇಕಡ 4 ರಷ್ಟು ಮಾತ್ರ ಇದೆ ಎಂದು ಹೇಳಿದರು.

ಸರ್ಕಾರಗಳು ಕೇಂದ್ರ ಮತ್ತು ರಾಜ್ಯದಿಂದ ಹಿಡಿದು ಗ್ರಾಮಪಂಚಾಯಿತಿ ಮಟ್ಟದವರೆಗೂ ನೀರು ಒದಗಿಸುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಗ್ರಾಮೀಣ ಭಾಗದಲ್ಲಿ ಬಡಜನರು ದುಡಿಯಲು ಮೀಸಲಿಟ್ಟ ಸಮಯದಷ್ಟು ನೀರನ್ನು ತರಲು ವ್ಯರ್ಥ ಮಾಡುತ್ತಿದ್ದಾರೆ. ನೀರು ಹಾಗೂ ಆಹಾರ ಎಷ್ಟು ಗುಣಮಟ್ಟದ್ದಾಗಿರುತ್ತದೆಯೋ ಅಷ್ಟು ಆರೋಗ್ಯ ಚೆನ್ನಾಗಿರುತ್ತದೆ. ಕಲುಷಿತ ನೀರಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳಿರುವ ಕಾರಣದಿಂದಾಗಿಯೇ ಪ್ರಧಾನ ಮಂತ್ರಿಗಳು 2019ರ ಆಗಸ್ಟ್ 15ರಂದು ಜಲ ಜೀವನ್ ಮಿಷನ್ ಯೋಜನೆಯನ್ನು ಘೋಷಿಸಿದರು. ಈ ಮೂಲಕ ದೇಶಾದ್ಯಂತ 18 ಕೋಟಿ ಕುಟುಂಬಗಳಿಗೆ 3.5 ಲಕ್ಷ ಕೋಟಿ ರೂ. ವೆಚ್ಚಮಾಡಿ ಮನೆಮನೆಗೂ ನೀರನ್ನು ಒದಗಿಸುವ ಕಾರ್ಯಕ್ರಮವನ್ನು ಅನುಷ್ಠನಗೊಳಿಸಿ ದೇಶದಲ್ಲಿ ಈಗಾಗಲೇ 2 ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಮೂಲಕ ನೀರು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 693 ಕಂದಾಯ ಗ್ರಾಮಗಳು ಮತ್ತು 876 ಜನವಸತಿ ಪ್ರದೇಶಗಳಿವೆ. ಇದರಲ್ಲಿ 2020-21ನೇ ಸಾಲಿನಲ್ಲಿ 356 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಿ, 161 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ. 2021-22ನೇ ಸಾಲಿನಲ್ಲಿ 125 ಕಾಮಗಾರಿಗಳಲ್ಲಿ 90 ಕಾಮಗಾರಿಗಳು ಪೂರ್ಣಗೊಂಡಿದ್ದು 35 ಪ್ರಗತಿಯಲ್ಲಿವೆ. 2024ರೊಳಗೆ ಜಿಲ್ಲೆಯ ಎಲ್ಲಾ ಕಂದಾಯ ಮತ್ತು ಜನವಸತಿ ಗ್ರಾಮಗಳ ಮನೆ ಮನೆಗೆ ನೀರು ಒದಗಿಸುವ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ತರಬೇತಿಯಿಂದ ಹೆಚ್ಚಿನ ಜ್ಞಾನ ಪಡೆದು, ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರ ನೀಡಬೇಕು. ಒಟ್ಟಾರೆ ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆ ಮನೆಗೂ ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಅಯೋಜನೆ ಮಾಡಲಾಗಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರದ ಜೊತೆಗೆ ಜನಸಮುದಾಯಗಳ ಸಹಕಾರವು ಮುಖ್ಯವಾಗಿದೆ. ಜಲ ಜೀವನ್ ಮಿಷನ್ ಯೋಜನೆಯಿಂದ ನೀರು ಒದಗಿಸುವುದು ಮಾತ್ರವಲ್ಲದೆ ವಿದ್ಯುಚ್ಚಕ್ತಿಯ ಉಳಿತಾಯವು ಆಗಲಿದೆ ಎಂದರು.

ಕೆ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆದ್ದರಿಂದ ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದು ಯೋಜನೆಯ ಸಮರ್ಪಕ ಜಾರಿಗೆ ಪ್ರಯತ್ನಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಲ್ಲಿಕಾರ್ಜುನಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಉಪಾಧ್ಯಕ್ಷರು, ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನೀರಗಂಟಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top