Connect with us

Dvgsuddi Kannada | online news portal | Kannada news online

ದಾವಣಗೆರೆ: ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ; ಜಿಲ್ಲಾಧಿಕಾರಿ

ದಾವಣಗೆರೆ

ದಾವಣಗೆರೆ: ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ; ಜಿಲ್ಲಾಧಿಕಾರಿ

ದಾವಣಗೆರೆ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಕೋರಿಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು ಕೊರತೆಗಳ ಜಂಟಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ತಾಲ್ಲೂಕುವಾರು ನೌಕರರ ಸಂಘದ ಅಧ್ಯಕ್ಷರು ತಮ್ಮ ತಾಲ್ಲೂಕುಗಳಲ್ಲಿನ ನೌಕರರ ಕುಂದು ಕೊರತೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಹೊನ್ನಾಳಿ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಅಲ್ಲಿನ ನೌಕರರಿಗೆ ಸಾರ್ವಜನಿಕರಿಂದ ಕಿರುಕುಳ ಉಂಟಾಗುತ್ತಿದ್ದು ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕು ಮತ್ತು ಆರೋಗ್ಯ ಇಲಾಖೆಯ ನೌಕರರಿಗೆ ಸರಿಯಾದ ಸಮಯಕ್ಕೆ ಪ್ರವಾಸ ಭತ್ಯೆ ಪಾವತಿ ಮಾಡಬೇಕು ಹಾಗೂ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಮತ್ತು ಪ್ರವಾಸ ಭತ್ಯೆ ಪಾವತಿಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಅವರಿಗೆ ಸೂಚಿಸಿದರು ಅಲ್ಲದೆ, ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ 24*7 ಪೊಲೀಸ್ ವ್ಯವಸ್ಥೆಗೆ ಸೂಚಿಸಿದರು.

ಹರಿಹರ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಆರೋಗ್ಯ ಇಲಾಖೆಯ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಮಂಜೂರು ಆಗುತ್ತಿಲ್ಲ ಈ ಕುರಿತು ಗಮನ ಹರಿಸಲು ಮನವಿ ಮಾಡಿದರು. ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಪ್ರತಿಕ್ರಿಯಿಸಿ ಸಕಾಲದಲ್ಲಿ ವೇತನ ಪಾವತಿ ಕುರಿತಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮತ್ತೊಮ್ಮೆ ನಮ್ಮ ಗಮನಕ್ಕೆ ತನ್ನಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ನ್ಯಾಮತಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ನಮ್ಮದು ನೂತನವಾಗಿ ರಚನೆಯಾಗಿರುವ ತಾಲ್ಲೂಕು ಆಗಿದ್ದು, ಕೆಲವೇ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ ಇರುವ ಕಛೇರಿಗಳಲ್ಲೆ ಸರ್ಕಾರದ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಅಲ್ಲಿನ ನೌಕರರಿಗೆ ಸಾರ್ವಜನಿಕರಿಂದ ಕಿರುಕುಳ ಉಂಟಾಗುತ್ತಿದೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಆರೋಗ್ಯ ವಿಮೆಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ನ್ಯಾಮತಿ ತಾಲ್ಲೂಕಿನ ಕಛೇರಿಗಳ ಸಮಸ್ಯೆ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಚನ್ನಗಿರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಕಳೆದ ಜನವರಿಯಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಹಲ್ಲೆಯಾಗಿದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತ್ಯಾವಣಿಗೆ, ನಲ್ಲೂರು, ತಾವರಕೆರೆ, ಜಿ.ಕೆ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಸರಿಯಾಗಿ ವೇತನ ಬಿಡುಗಡೆಯಾಗಿಲ್ಲ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‍ಐಆರ್ ಆಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ತಿಳಿಸಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ತ್ಯಾವಣಿಗೆ, ನಲ್ಲೂರು, ತಾವರಕೆರೆ, ಜಿ.ಕೆ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರ ವೇತನದ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರಿಗೆ ಸೂಚಿಸಿದರು.

ಜಗಳೂರು ನೌಕರರ ಸಂಘದ ಅಧಕ್ಷ ಎನ್.ಸಿ ಅಜ್ಜಯ್ಯ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ನೌಕರರಿಗೆ ಸೆಕ್ಟರ್ ವೇತನ ಪಾವತಿಯಾಗಿಲ್ಲ ಮತ್ತು ಅದೇ ಚುನಾವಣೆಯಲ್ಲಿ 13 ಜನರ ಮೇಲೆ ಎಫ್‍ಐಆರ್ ಆಗಿತ್ತು ಇವುಗಳ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ 13 ಜನರ ಮೇಲೆ ಎಫ್‍ಐಆರ್ ಆಗಿರುವುದರ ಕುರಿತು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ನೌಕರರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಒಂದು ವೇಳೆ ಅನ್ಯಾಯ ಮಾಡಿದ್ದರೆ ನೌಕರರ ಮೇಲೆಯೂ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ನ್ಯಾಯಯುತ ತನಿಖೆ ಮಾಡಲಾಗುವುದು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ದಾವಣಗೆರೆ ಜಿಲ್ಲೆಯಾಗಿ 25 ವರ್ಷ ತುಂಬಿದೆ ಹಾಗಾಗಿ ರಜತ ಮಹೋತ್ಸವ ಕಟ್ಟಡ ನಿರ್ಮಿಸಲು ಸರ್ಕಾರಿ ನೌಕರರ ಸಂಘಕ್ಕೆ 2 ಎಕರೆ ಜಮೀನು ಮಂಜೂರು ಮಾಡಿಕೊಡಬೇಕು. ಜೊತೆಗೆ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಏರ್ಪಡಿಸಲು ಅನುಮತಿ ನೀಡಬೇಕು ಮತ್ತು ಸರ್ವೋತ್ತಮ ಪ್ರಶಸ್ತಿ ನೀಡುವ ಕುರಿತು ಇದೇ ವೇಳೆ ಚರ್ಚೆ ನಡೆಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ, ಸರ್ಕಾರಿ ನೌಕರರ ಸಂಘಕ್ಕೆ 2 ಎಕರೆ ಜಮೀನು ಮಂಜೂರು ಮಾಡಲು ಸೂಕ್ತ ಜಮೀನು ಗುರುತಿಸಿದರೆ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಕೋವಿಡ್ ಪ್ರಕರಣ ಇಳಿಮುಖವಾದರೆ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಏರ್ಪಡಿಸಲು ಸರ್ಕಾರದ ನಿಯಮದಂತೆ ಅನುಮತಿ ನೀಡಲಾಗುವುದು ಎಂದರು.

ಈ ವೇಳೆ ಎಸ್.ಎಸ್.ಎಲ್.ಸಿ ಸಮಾಜ ವಿಜ್ಞಾನ ಕಲಿಕಾ ಮಾರ್ಗದರ್ಶಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಅವರು ಬಿಡುಗಡೆಗೊಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top