ದಾವಣಗೆರೆ: ನಗರದ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವರೆಗಿನ ಮುಖ್ಯರಸ್ತೆಗೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ರಸ್ತೆ ಎಂದು ನಾಮಕರಣ ಮಾಡಲು ದೇವಸ್ಥಾನದ ಟ್ರಸ್ಟ್ ನ ಸದಸ್ಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಸ್ತೆಗೆ ಮಹಾನಗರ ಪಾಲಿಕೆ ವತಿಯಿಂದ ಡಾ. ವೀರಸೋಮೇಶ್ವರ ರಸ್ತೆ ಎಂದು ನಾಮಕರಣ ಮಾಡಲು ಮುಂದಾಗಿದೆ. ಈ ವಿಚಾರಕ್ಕೆ ನಿಟುವಳ್ಳಿ ಗ್ರಾಮಸ್ಥರು ಮತ್ತು ಸಾರ್ವಜನಿಕರು ವಿರೋಧವಿದೆ. ಈ ಬಗ್ಗೆ ಟ್ರಸ್ಟ್ ನಿಂದ ಮೇಯರ್ ಹಾಗೂ ಶಾಸಕ ಎಸ್ ಎ ರವೀಂದ್ರನಾಥ್ ಅವರ ಗಮನಕ್ಕೆ ತಂದು ಮನವಿ ನೀಡಿದ್ದೇವೆ. ನಮ್ಮ ಮನವಿಗೆ ಇದುವರೆಗೆ ಸ್ಪಂದಿಸಿಲ್ಲ ಎಂದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಈಗಾಗಲೇ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮುಖ್ಯರಸ್ತೆ ಎಂದು ಸಾರ್ವಜನಿಕವಾಗಿ ಪ್ರಸಿದ್ಧಿಯಾಗಿದೆ. ಈ ದೇವಸ್ಥಾನಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ದೇವಸ್ಥಾನಕ್ಕೆ ಜಾತಿ- ಭೇದವಿಲ್ಲದೆ ಎಲ್ಲರೂ ಭಕ್ತರಿದ್ದಾರೆ. ಹೀಗಾಗಿ ಮುಖ್ಯ ರಸ್ತೆಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ರಸ್ತೆ ಎಂದು ಹೆಸರಿಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಪಾಲಿಕೆ ಮೇಲೆಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದರು.
ಇನ್ನು ನಿಟುವಳ್ಳಿ ಶ್ರೀ ಕರಿಯಮ್ಮ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಯ ವರೆಗಿನ ಮುಖ್ಯ ರಸ್ತೆಗೆ ಭಾರತರತ್ನ ವಾಜಪೇಯಿ ರಸ್ತೆ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿದ್ದು, ಈ ವಿಚಾರವಾಗಿಯೂ ಸಾರ್ವಜನಿಕರು ವಿರೋಧ ವ್ಯಕ್ತವಾಗಿದೆ. ಈ ರಸ್ತೆಗೆ ನಿಟುವಳ್ಳಿ ಕರಿಯಮ್ಮ ದೇವಸ್ಥಾನ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಚ್.ಬಿ ಮಂಜುನಾಥ್, ಹೆಚ್ ಸುರೇಶ್,ಕೃಷ್ಣಪ್ಪ ಹುಲ್ಲುಮನೆ,ಪ್ರವೀಣ್ ಹುಲ್ಲುಮನೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.