ದಾವಣಗೆರೆ: ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಸೆ.24 ಹಾಗೂ ಸೆ.28 ರಂದು ಆಹಾರ ಶಿರಸ್ತೆದಾರ್ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಲಾರಿ ಸಂಖ್ಯೆ ಕೆಎ-68-1296 ರಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 24 ಕ್ವಿಂಟಾಲ್ ಅಕ್ಕಿಯನ್ನು ಮತ್ತು ವಾಹನ ಸಂಖ್ಯೆ ಕೆಎ-35-ಎಂ-2799 ರ ಮಾರುತಿ ಓಮಿನಿಯಲ್ಲಿ 2.25 ಕ್ವಿಂಟಾಲ್ ರಾಗಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ನ.23 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹರಿಹರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಕಚೇರಿ ಕೆಲಸದ ಅವಧಿಯಲ್ಲಿ ಪರಿಶೀಲಿಸಬಹುದು. ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಬಿಡ್‍ದಾರರು ರೂ.10 ಸಾವಿರ ಗಳನ್ನು ಮುಂಗಡ ಭದ್ರತಾ ಠೇವಣಿಯನ್ನಾಗಿ ಪಾವತಿಸಬೇಕಾಗಿರುತ್ತದೆ. ಹರಾಜು ಮುಗಿದ ನಂತರ ಗರಿಷ್ಠ ಹಾಗೂ ಎರಡನೇ ಗರಿಷ್ಠ ಬಿಡ್‍ದಾರರನ್ನು ಹೊರತುಪಡಿಸಿ ಉಳಿದ ಬಿಡ್‍ದಾರರಿಗೆ ಸ್ಥಳದಲ್ಲಿಯೇ ಹಣವನ್ನು ಹಿಂತಿರುಗಿಸಲಾಗುವುದು. ಗರಿಷ್ಠ ಬಿಡ್ ಕರೆದ ವ್ಯಕ್ತಿಯು ಹರಾಜು ಆದ ದಿನವೇ ಪೂರ್ತಿ ಹಣವನ್ನು ಸ್ಥಳದಲ್ಲಿಯೇ ಪಾವತಿ ಮಾಡತಕ್ಕದ್ದು ಮತ್ತು ಅದೇ ದಿನ ದಾಸ್ತಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗತಕ್ಕದ್ದು.
ಸವಾಲುದಾರರು ಇಲಾಖೆಯ ಕಾನೂನಿಗೆ ಒಳಪಟ್ಟಿರಬೇಕು. ಸವಾಲುದಾರರು ಹರಾಜಿನಲ್ಲಿ ಗೊತ್ತುಪಡಿಸಿದ ದಿನಾಂಕದಂದು ಅರ್ಧ ಗಂಟೆ ಮುಂಚಿತವಾಗಿ ಭಾಗವಹಿಸತಕ್ಕದ್ದು. ಅಂತಿಮ ಹರಾಜನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಹಾಗೂ ಹರಾಜಿನಲ್ಲಿ ನಿಗದಿಪಡಿಸಿದ ಸರ್ಕಾರಿ ಸವಾಲಿನ ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿ ಅಥವಾ ಹರಾಜು ಸಮಯದಲ್ಲಿ ಬಿಡ್‍ದಾರರ ಸಂಖ್ಯೆ ಕಡಿಮೆಯಿದ್ದಲ್ಲಿ ಹರಾಜನ್ನು ಮುಂದೂಡುವ ಅಧಿಕಾರ ಹರಿಹರ ತಹಶೀಲ್ದಾರ್ ಅವರ ಅಧಿಕಾರಕ್ಕೆ ಒಳಪಟ್ಟಿರುತ್ತದೆ ಎಂದು ಹರಿಹರ ತಹಸಿಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



