ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳಾ ಅಭ್ಯರ್ಥಿ ಸರಸ್ವತಿ ಶಿವಪ್ಪ ಚಿಮ್ಮಲಗಿ ಅವರು ಸ್ಪರ್ಧಿಸಿದ್ದು, ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಲೇಖಕಿ ಬಿ.ಟಿ ಲಲಿತಾನಾಯ್ಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಾಪ ಚುನಾವಣೆಯಲ್ಲಿ ಮಹಿಳೆ ಸ್ಪರ್ಧಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬಂದಿದೆ. ಇದೀಗ ಮಹಿಳಾ ಅಭ್ಯರ್ಥಿಯೊಬ್ಬರು ಸ್ಪರ್ಧೆಯಲ್ಲಿದ್ದಾರೆ.ಇಲ್ಲಿ ಸ್ತ್ರೀ-ಪುರುಷ ಎಂಬ ಭಾವನೆ ಬರಬಾರದು ಯಾರಿಗೆ ಕೆಲಸ ಮಾಡುವ ಸಾಮರ್ಥ್ಯ ಇದೆ ಎಂಬುದು ಮುಖ್ಯವಾಗಬೇಕು.ಈ ನಿಟ್ಟಿನಲ್ಲಿ ಸರಸ್ವತಿ ದಕ್ಷ ಆಡಳಿತ ನಡೆಸುವ ಸಾಮರ್ಥ್ಯ ಹೊಂದಿದ್ದು, ಪದವೀಧರರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು,ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ರಂಗಭೂಮಿ ಕಲಾವಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕಸಾಪ ಮುನ್ನಡೆಸಲು ಈ ಬಾರಿ ಮತದಾರರು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸರಸ್ವತಿ ಚಿಮ್ಮಲಗಿ ಮಾತನಾಡಿ, ಕನ್ನಡದ ಸೇವೆ ಮಾಡಲು ಅವಕಾಶ ಬೇಕಿದೆ. ಎಲ್ಲಾ ಕ್ಷೇತ್ರದಲ್ಲೂ ನಾನು ಕ್ರಿಯಾಶೀಲತೆ ಹೊಂದಿದ್ದೇನೆ.ಮಹಿಳೆ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬ ಭಾವನೆ ಬೇಡ. ಮಹಿಳೆ ಎಂಬ ಕಾರಣಕ್ಕೆ ಸ್ಪರ್ಧೆ ಮಾಡುತ್ತಿಲ್ಲ. ನನ್ನ ಸಾಹಿತ್ಯ ಸಾಧನೆ, ರಂಗಕ್ಷೇತ್ರಕ್ಕೆ ನೀಡಿದ ಕೊಡುಗೆ,ಸಾಮಾಜಿಕ ಸೇವೆ ಮತ್ತು ಮಹಿಳೆಯರ, ಶೋಷಿತರ ಪರ ಹೋರಾಟ ಹಾಗೂ ಮಾನವೀಯ ಕಾಳಜಿಗಲಕು ನನ್ನನ್ನು ಸ್ಪರ್ಧಿಸುವಂತೆ ಪ್ರೇರೆಪಿಸಿದೆ.ನನ್ನ ಗುರಿ ಕನ್ನಡಮ್ಮನ ಸೇವೆ,ಮಹಿಳೆಯ ಅಸ್ತಿತ್ವ ಹಾಗೂ ಅಸ್ಮಿತೆ,ಪರಿಷತ್ತಿನ ಗೌರವ ಘನತೆ ಎತ್ತಿಹಿಡಿಯುವುದಾಗಿದೆ ಎಂದರು. ಈ ಸಂದರ್ಭದಲ್ಲಿ ಸತ್ಯಭಾಮ ಮಂಜುನಾಥ್, ಡಾ.ಪಾರ್ವತಿ,ಬಿ.ವಾಸುದೇವ್, ಅಬ್ದುಲ್ ಮಜೀದ್, ಅನ್ನಪೂರ್ಣ ಪಾಟೀಲ್, ಅರುಣಾ ಬಿರಾದರ್ ಇದ್ದರು.